ಕರ್ನಾಟಕ

ಸಿದ್ದರಾಮಯ್ಯ ಆಪ್ತ ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ

Pinterest LinkedIn Tumblr


ಬೆಂಗಳೂರು(ಅ. 18): ಸಿದ್ದರಾಮಯ್ಯ ಅವರ ಪರಮಾಪ್ತ ಶಾಸಕರಾಗಿರುವ ಭೈರತಿ ಸುರೇಶ್ ಅವರನ್ನು ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಕೊತ್ತನೂರಿನ ಭೈರತಿ ಗ್ರಾಮದಲ್ಲೇ ಸುರೇಶ್ ಅವರನ್ನು ಕೊಲೆಗೈಯಲು ಯತ್ನಿಸಿಲಾಗಿದೆ. ಗ್ರಾಮದ ಶಿವ ಎಂಬಾತ ಚಾಕುವಿನಿಂದ ಭೈರತಿ ಸುರೇಶ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆದರೆ, ಭೈರತಿ ಸುರೇಶ್ ಬೆಂಬಲಿಗರು ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜನರ ಗುಂಪಿನೊಂದಿಗೆ ಭೈರತಿ ಸುರೇಶ್ ಮಾತನಾಡುವಾಗ ಶಿವು ಎಂಬಾತ ಏಕಾಏಕಿ ಚಾಕು ಹಿಡಿದು ಮುಂದೆ ಬಂದ ಎನ್ನಲಾಗಿದೆ. ಆದರೆ, ಈತನ ಈ ಕೃತ್ಯಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಕೊತ್ತನೂರು ಪೊಲೀಸರು ಆರೋಪಿ ಶಿವುನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

35 ವರ್ಷದ ಆರೋಪಿ ಶಿವಕುಮಾರ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನ ತಂದೆ ನಾಟಕ ಮೇಷ್ಟ್ರು ಎನ್ನಲಾಗಿದೆ. ಭೈರತಿ ಸುರೇಶ್ ಅವರಿಗೆ ಈತನ ಪರಿಚಯ ಕೂಡ ಇದೆ. ಸಿಕ್ಕಿರುವ ಮಾಹಿತಿ ಪ್ರಕಾರ 2-3 ದಿನಗಳಿಂದಲೂ ಈತ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದುದು ಭೈರತಿ ಸುರೇಶ್ ಗನ್​ಮೆನ್​ಗಳ ಗಮನಕ್ಕೆ ಬಂದಿತ್ತು. ಇದನ್ನು ಭೈರತಿ ಸುರೇಶ್ ಅವರಿಗೆ ಮೊದಲೇ ಅಲರ್ಟ್ ಮಾಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭೈರತಿ ಸುರೇಶ್ ಬಚಾವಾಗಲು ಸಾಧ್ಯವಾಗಿದೆ ಎನ್ನಲಾಗಿದೆ.

ಸಿಕ್ಕಿರುವ ಮತ್ತೊಂದು ಮಾಹಿತಿ ಪ್ರಕಾರ, ಭೈರತಿ ಸುರೇಶ್ ಅವರು ಆರೋಪಿ ಶಿವಕುಮಾರ್ ಅವರಿಗೆ ಮನೆಯೊಂದನ್ನು ಕಟ್ಟಿಕೊಡಲು ನೆರವಾಗಿದ್ದರು. ಆದರೆ, ಆ ಮನೆ ಅಪೂರ್ಣಗೊಂಡಿದೆ. ಶಿವು ಈ ವಿಚಾರವನ್ನು ಮುಂದಿಟ್ಟುಕೊಂಡು ಭೈರತಿ ಸುರೇಶ್ ಮೇಲೆ ಕೋಪಗೊಂಡಿದ್ದನೆಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ.

ಇಂದು ಮಧ್ಯಾಹ್ನ ಭೈರತಿ ಸುರೇಶ್ ಅವರು ಮನೆಯಿಂದ ಹೊರಗೆ ಬರುವಾಗ ಅವರ ಕಾರಿಗೆ ಶಿವಕುಮಾರ್ ತನ್ನ ದ್ವಿಚಕ್ರ ವಾಹನದಿಂದ ಗುದ್ದುತ್ತಾನೆ. ಈ ವೇಳೆ ಭೈರತಿ ಸುರೇಶ್ ಬುದ್ಧಿ ಹೇಳಿದ್ದಾರೆ. ಅಷ್ಟಕ್ಕೆ ಚಾಕು ಹಿಡಿದು ಶಿವಕುಮಾರ್ ಹಲ್ಲೆಗೆ ಮುಂದಾಗುತ್ತಾನೆ. ಆಗ ಗನ್​ಮ್ಯಾನ್, ಡ್ರೈವರ್ ಮತ್ತು ಸ್ಥಳೀಯರು ಭೈರತಿ ಸುರೇಶ್ ಅವರನ್ನು ರಕ್ಷಿಸುತ್ತಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಆರೋಪಿ ಶಿವಕುಮಾರ್​ನನ್ನು ಬಂಧಿಸಿರುವ ಕೊತ್ತನೂರು ಠಾಣೆ ಪೊಲೀಸರು, ಕೊಲೆಯತ್ನ ಪ್ರಕರಣ ದಾಖಲು ಮಾಡಿದ್ದಾರೆ.

ಇನ್ನು, ಭೈರತಿ ಸುರೇಶ್ ಅವರು ಸಿದ್ದರಾಮಯ್ಯನವರ ಪರಮಾಪ್ತರಾಗಿದ್ದಾರೆ. ಹೆಬ್ಬಾಳದ ಕಾಂಗ್ರೆಸ್ ಶಾಸಕರಾಗಿರುವ ಅವರು ತಮ್ಮ ಪತ್ನಿ ಪದ್ಮಾವತಿ ಅವರನ್ನು ಹೊಸಕೋಟೆ ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಯೋಜಿಸಿದ್ದರು. ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನೂ ಅವರು ಶುರು ಮಾಡಿದ್ದರೆನ್ನಲಾಗಿದೆ.

ಭೈರತಿ ಸುರೇಶ್ ಪ್ರತಿಕ್ರಿಯೆ:

ಶಿವು ನನಗೆ ಬಹಳ ದಿನದಿಂದ ಪರಿಚಯ ಇರುವ ಹುಡುಗ. ಅವರ ತಂದೆ ಕಾಲದಿಂದಲೂ ನನಗೆ ಆತ ಗೊತ್ತು. ಅವರ ತಂದೆ ನಾಟಕದ ಮೇಷ್ಟ್ರಾಗಿದ್ದರು. ಮನೆ ಕಟ್ಟಿಕೊಡಲು ಅವರ ತಾಯಿಗೆ 2 ಲಕ್ಷ ಹಣ ನೀಡಿದ್ದೆ. ಆದರೆ, ಯಾವ ಕಾರಣಕ್ಕೆ ಶಿವು ಈ ರೀತಿ ಮಾಡಿ ಎಂದು ಗೊತ್ತಿಲ್ಲ. ಕಾರು ಡಿಕ್ಕಿ ಹೊಡೆದು ಏಕಾಏಕಿ ಚಾಕು ಹಿಡಿದು ಬಂದ. ನಮ್ಮ ಗನ್ ಮ್ಯಾನ್ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಆತ ಯಾರಾದರೂ ಹೇಳಿಕೊಟ್ಟು ಈ ಕೆಲಸ ಮಾಡಿದನಾ ಎಂದು ಗೊತ್ತಿಲ್ಲ. ಖುದ್ದು ಗೃಹ ಸಚಿವರು ಕರೆ ಮಾಡಿ ವಿಚಾರಿಸಿದರು ಎಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿದ್ದಾರೆ.

Comments are closed.