ಕರ್ನಾಟಕ

ಮೈಸೂರು: ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಹಿಂಸಾಚಾರ: ಪೊಲೀಸ್​​ ಲಘು ಲಾಠಿ ಪ್ರಹಾರ

Pinterest LinkedIn Tumblr


ಮೈಸೂರು(ಅ.13): ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ನಂಜನಗೂಡು ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ. ಮೆರವಣಿಗೆಯಲ್ಲಿ ಡಿಜೆ ಸೌಂಡ್‍ಗೆ ಸ್ಟೆಪ್ ಹಾಕಲು ಅವಕಾಶ ನೀಡದ ಕಾರಣ, ಪೊಲೀಸರ ವಿರುದ್ಧವೇ ವಾಲ್ಮೀಕಿ ಸಮಾಜದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಜೆ ವಿಚಾರಕ್ಕೆ ಪೊಲೀಸರು ಮತ್ತು ಯುವಕರ ಗುಂಪಿನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಲಘು ಲಾಠಿಪ್ರಹಾರ ನಡೆಸಲಾಗಿದೆ.

ನಂಜನಗೂಡು ನಗರದ ಶ್ರೀಕಂಠೇಶ್ವರ ದೇವಸ್ಥಾನದ ಸಮೀಪದ ಕಲಾಮಂದಿರದಲ್ಲಿ ವಾಲ್ಮೀಕಿ ಜಯಂತಿ ಆಯೋಜಿಸಲಾಗಿತ್ತು. ಜಯಂತಿ ಪ್ರಯುಕ್ತ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆ ವೇಳೆ ಯುವಕರು ಡಿಜೆ ಹಾಕಿಕೊಂಡು ಕುಣಿಯುತ್ತಿದ್ದರು. ಆಗ ಏನಾದರೂ ಗಲಾಟೆಯಾಗಬಹುದು ಎಂದು ಪೊಲೀಸರು ಡಿಜೆಗೆ ಸ್ಟೆಪ್​​ ಹಾಕಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ.

ಸ್ಥಳದಲ್ಲಿ ಪೊಲೀಸರು ಮತ್ತು ಯುವಕರ ನಡುವೇ ತೀವ್ರ ಮಾತಿನ ಚಕಮಕಿಯೂ ನಡೆದಿದೆ. ಇದರಿಂದ ಕೆರಳಿದ ಯುವಕರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಡಿವೈಎಸ್​​ಪಿ ಮಲ್ಲಿಕ್ ಸೇರಿದಂತೆ ಕೆಲವು ಪೊಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ.

ಇನ್ನು ಮೈಸೂರು-ಊಟಿ ರಸ್ತೆ ಮಧ್ಯೆಯೇ ಕುಳಿತು ಯುವಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಇದರಿಂದಾಗಿ ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಮಾಲೀಕರು ಅಂಗಡಿ ಮಳಿಗೆಗಳನ್ನು ಬಂದ್ ಮಾಡಿದ್ದಾರೆ.

ಲಾಠಿಚಾರ್ಜ್​​ ಬಳಿಕ ಪರಿಸ್ಥಿತಿಯನ್ನು ತಿಳಿಗೊಳಿಸಿದ ಪೊಲೀಸರು ಮೆರವಣಿಗೆ ಪೂರ್ಣಗೊಳಿಸಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ಪೊಲೀಸ್​​ ಬಿಗಿ ಬಂದೋಬಸ್ತ್​​​ ಕೂಡ ಏರ್ಪಡಿಸಲಾಗಿದೆ. ಹಾಗಾಗಿಯೇ ಕಾರ್ಯಕ್ರಮ ಸುಸೂತ್ರವಾಗಿ ನಡೆಯುತ್ತಿದೆ ಎನ್ನಲಾಗುತ್ತಿದೆ.

Comments are closed.