ಕರಾವಳಿ

ಕುಂದಾಪುರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Pinterest LinkedIn Tumblr

ಕುಂದಾಪುರ: ರಾಮಾಯಣ ಎಂಬ ಮಹದ್ಗ್ರಂಥವನ್ನು ರಚಿಸಿ ಲೋಕ ಮೆಚ್ಚುವ ಕೆಲಸ ಮಾಡಿದವರು ಮಹರ್ಷಿ ವಾಲ್ಮೀಕಿ ಅವರು. ವಿದ್ಯೆಯಿಂದ ಸಮಾಜ ಮುಂಚೂಣಿಗೆ ಬರುತ್ತದೆ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದ್ದು ಸಮಾಜದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸುಶಿಕ್ಷಿತರಾಗಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಭಾನುವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟೆಲ್‌ಗಳು, ವಿದ್ಯಾನಿಧಿಗಳು ನೀಡಲ್ಪಡುತ್ತವೆ. ಎಲ್ಲ ಹಾಸ್ಟೆಲ್‌ಗಳಲ್ಲೂ ಉತ್ತಮ ಸೌಲಭ್ಯವಿದ್ದು ಅಲ್ಲಿ ನೀಡುವ ಊಟ, ವಸತಿ ವಿದ್ಯಾರ್ಥಿಗಳ ಹಕ್ಕು. ಅದು ದಾನ ಅಲ್ಲ. ಆದ್ದರಿಂದ ಎರಡನೆ ದರ್ಜೆ ಗುಣಮಟ್ಟಕ್ಕೆ ಆಸ್ಪದವಿಲ್ಲ. ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಸಮಾಜದ ಎಲ್ಲರೂ ವಿದ್ಯಾವಂತರಾದರೆ ಮನೆ ಬೆಳಗಬಹುದು. ಹೆಣ್ಣು ಕಲಿತರೆ ಸಂಸ್ಕಾರಯುತ ಕುಟುಂಬ ರಚನೆಯಾಗಬಹುದು. ಆ ಮನೆ ದೇಶಪ್ರೇಮ, ಸಂಸ್ಕಾರ, ಸಂಸ್ಕೃತಿಯ ನೆಲೆವೀಡು ಆಗಬಹುದು. ಈಗಿನ ಕಾಲದಲ್ಲಿ ಯುವತಿಯರು ನಮ್ಮತನ ತೋರಿಸಲು, ಉದ್ಯೋಗಕ್ಕಾಗಿ ಅಲ್ಲದಿದ್ದರೂ ಕನಿಷ್ಟ ಪದವಿ ಶಿಕ್ಷಣವನ್ನಾದರೂ ಪಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ವಹಿಸಿದ್ದರು. ಪ್ರಧಾನ ಉಪನ್ಯಾಸವನ್ನು ವಡೇರಹೋಬಳಿ ಸರಕಾರಿ ಮಧುಸೂದನ ಕುಶೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ನೀಡಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ಕುಂದಾಪುರ ತಹಶೀಲ್ದಾರ್ ಎಚ್.ಕೆ. ತಿಪ್ಪೇಸ್ವಾಮಿ, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ, ಕುಂದಾಪುರ ತಾ.ಪಂ. ಸಹಾಯಕ ನಿರ್ದೇಶಕ ಇಬ್ರಾಹಿಂಪುರ್ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್. ವರ್ಣೇಕರ್ ಸ್ವಾಗತಿಸಿ, ರಮೇಶ್ ಕುಲಾಲ್ ನಿರ್ವಹಿಸಿದರು.

Comments are closed.