ಕರ್ನಾಟಕ

ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಮೇಲೆ ಐಟಿ ದಾಳಿಗೆ ಅಣ್ಣನ ಮಗನ ಸಿನಿಮಾ ಹುಚ್ಚು ಕಾರಣ

Pinterest LinkedIn Tumblr


ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಕೋಟೆಗೆ ಐಟಿ ಅಧಿಕಾರಿಗಳು ಲಗ್ಗೆಯಿಡಲು ಅವರ ಸಹೋದರನ ಪುತ್ರನ ಸಿನಿಮಾ ಹುಚ್ಚು , ವೈಯಕ್ತಿಕ ಆಸೆ, ಆಕಾಂಕ್ಷೆಗಳೇ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ವೈದ್ಯಕೀಯ ಸೀಟು ಹಂಚಿಕೆ ವಿಚಾರವಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಟ್ರಸ್ಟ್‌ನ ಕಾರ್ಯದರ್ಶಿಯಾಗಿರುವ ದಿ. ಶಿವಪ್ರಸಾದ್‌ ಅವರ ಪುತ್ರ ಆನಂದ ಮತ್ತು ಅವರ ತಂಡದಿಂದ ವಂಚನೆಗೊಳಗಾದ ವಿದ್ಯಾರ್ಥಿಗಳು ಐಟಿ ಇಲಾಖೆಗೆ ನೀಡಿದ್ದ ಮಾಹಿತಿ, ಗುಪ್ತಚರ ಮಾಹಿತಿಯಿಂದ ಪರಮೇಶ್ವರ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಿದ್ದಾರ್ಥ ಕಾಲೇಜಿನಲ್ಲಿ ನೀಟ್‌ ಸೀಟುಗಳನ್ನು ಸರಂಡರ್‌, ಬ್ಲಾಕಿಂಗ್‌ ಮೂಲಕ ಮ್ಯಾನೇಜ್‌ಮೆಂಟ್‌ ಕೋಟಾಗಳಾಗಿ ಪರಿವರ್ತನೆ ಮಾಡಿಕೊಂಡು ದುಬಾರಿ ಬೆಲೆಗೆ ಮಾರಲಾಗುತ್ತಿತ್ತು. ಈ ವ್ಯವಹಾರಗಳನ್ನು ಆನಂದ ನೋಡಿಕೊಳ್ಳುತ್ತಿದ್ದರು. ಮೆಡಿಕಲ್‌ ಸೀಟು ಕೊಡಿಸುವ ದೊಡ್ಡ ಟೀಮ್‌ ಹೊರ ರಾಜ್ಯದ ವಿದ್ಯಾರ್ಥಿ ಮತ್ತು ಪೋಷಕರಿಂದ ಲಕ್ಷ ಲಕ್ಷ ವಸೂಲಿ ಮಾಡುತ್ತಿತ್ತು ಎಂದು ಹೇಳಲಾಗಿದೆ. ಕಳೆದ ಹಲವು ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿತ್ತುಎಂಬ ಮಾಹಿತಿ ಐಟಿ ಇಲಾಖೆಗೆ ಸಿಕ್ಕಿದೆ.

ಎಕೆ-56 ಚಿತ್ರದಲ್ಲಿ ನಾಯಕ ನಟನಾಗಿರುವ ಆನಂದ ಅವರನ್ನು ಸಿನಿಮಾ ಕ್ಷೇತ್ರದಲ್ಲಿ’ಸಿದ್ದಾಂತ’ ಹೆಸರಿನಿಂದ ಕರೆಯುತ್ತಾರೆ. ಸಿನಿ ರಂಗದಲ್ಲಿ ಆಸಕ್ತರಾಗಿರುವ ಆನಂದ, ಮೆಡಿಕಲ್‌ ಸೀಟಿನಿಂದ ಬರುವ ಹಣವನ್ನು ಸಿನಿಮಾಗಳಲ್ಲಿ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಆನಂದ, ಮೆಡಿಕಲ್‌ ನೀತಿ ನಿಯಮಗಳನ್ನು ಪಾಲನೆ ಮಾಡುತ್ತಿರಲಿಲ್ಲಎನ್ನುವುದು ಸಿಗುವ ಮಾಹಿತಿ.

ಕೆಲ ತಿಂಗಳ ಹಿಂದೆ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳಿಗೆ ಸೀಟು ಮಾರಾಟ ಮಾಡಿ ಲಕ್ಷಾಂತರ ರೂ. ಸಂಗ್ರಹಿಸಿದ್ದರೂ ಮೆಡಿಕಲ್‌ ಸೀಟು ನೀಡಿರಲಿಲ್ಲ. ಹೀಗಾಗಿ ನೊಂದ ವಿದ್ಯಾರ್ಥಿಗಳು ದಾಖಲೆ ಸಹಿತ ಐಟಿ ಇಲಾಖೆಗೆ ಮಾಹಿತಿ ನೀಡಿದ್ದರು. ಇತ್ತೀಚೆಗೆ ಮೆಡಿಕಲ್‌ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿದೆ. ಆಗಲೂ ಸಾಕಷ್ಟು ಹಣ ವರ್ಗಾವಣೆ, ಕಪ್ಪು ಹಣದ ಸಂಗ್ರಹ ಮಾಡಿರುವುದು ತಿಳಿದು ಬಂದಿತ್ತು. ಅಲ್ಲದೇ, ಕೋಲಾರದ ಆರ್‌.ಎಲ್‌ ಜಾಲಪ್ಪ ಮೆಡಿಕಲ್‌ ಕಾಲೇಜಿನಲ್ಲೂ ಇದೇ ರೀತಿ ಸೀಟು ಮಾರಾಟ ಹಗರಣ ಮತ್ತು ಅಕ್ರಮ ಹಣ ಸಂಗ್ರಹದ ಕುರಿತು ಮಾಹಿತಿ ಇತ್ತು. ಹೀಗಾಗಿ, ಅಧಿಕಾರಿಗಳು ಯೋಜಿತವಾಗಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಕಪ್ಪು ಹಣ ಸಂಗ್ರಹ, ಡೈರಿ ಪತ್ತೆ

ಸೀಟುಗಳ ಮಾರಾಟದಿಂದ ಭಾರಿ ಪ್ರಮಾಣದ ಕಪ್ಪು ಹಣ ಸಂಗ್ರಹ ಮತ್ತು ವರ್ಗಾವಣೆ ಮಾಡಲಾಗಿದೆ. ಪ್ರವೇಶ ಶುಲ್ಕದ ಹೊರತಾಗಿ ಕ್ಯಾಪಿಟೇಷನ್‌ ಶುಲ್ಕ ಸಂಗ್ರಹ, ಹಣ ವರ್ಗಾವಣೆ ಮತ್ತು ಆ ಹಣವನ್ನು ಟ್ರಸ್ಟಿಗಳು ದುರುಪಯೋಗ ಮಾಡಿಕೊಂಡಿರುವುದಕ್ಕೆ ಪರಿಶೀಲನೆ ವೇಳೆ ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ. ಪ್ರವೇಶಕ್ಕೆ ಸಂಬಂಧಿಸಿದ ದಾಖಲೆಗಳು, ಆಡಿಯೊ ರೆಕಾರ್ಡಿಂಗ್‌, ಡಿಜಿಟಲ್‌ ರೂಪದ ದಾಖಲೆಗಳು ಕೂಡ ದಾಳಿ ವೇಳೆ ಸಿಕ್ಕಿವೆ. ಸೀಟು ಕೊಡಿಸುವ ಮಧ್ಯವರ್ತಿಗಳು, ಏಜೆಂಟರ ಕುರಿತು ಮಾಹಿತಿ, ಆಸ್ತಿ ಮಾರಾಟ, ಖರೀದಿ ಸಂಬಂಧಿಸಿದ ದಾಖಲೆಗಳ ಜೊತೆಗೆ ಕೋಟ್ಯಂತರ ರೂ. ಹಣವು ಪತ್ತೆಯಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ಪರಮೇಶ್ವರ್‌ ವಿಚಾರಣೆ

ಗುರುವಾರ ಬೆಳಗ್ಗೆ ಸದಾಶಿವನಗರದ ಪರಮೇಶ್ವರ್‌ ಅವರ ಮನೆಗೆ ದಾಳಿ ಮಾಡಿದ್ದ ಅಧಿಕಾರಿಗಳು ರಾತ್ರಿಯೂ ಅಲ್ಲೇ ಉಳಿದುಕೊಂಡು ಶುಕ್ರವಾರವೂ ಶೋಧ ನಡೆಸಿದ್ದಾರೆ. ಶೋಧದ ವೇಳೆ ಸಿಕ್ಕಿರುವ ದಾಖಲೆಗಳ ಜೊತೆಗೆ ತಮ್ಮ ಬಳಿ ಇರುವ ದಾಖಲೆಗಳು ಮತ್ತು ತುಮಕೂರು ಜಿಲ್ಲೆಯ ವಿವಿಧೆಡೆ ಇರುವ ಸಂಸ್ಥೆಗಳ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಅವರ ಮುಂದಿಟ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಶನಿವಾರವೂ ಶೋಧ, ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ.

ಬ್ಯಾಂಕ್‌ ಖಾತೆಗಳು ಫ್ರೀಜ್‌

ಜಿ.ಪರಮೇಶ್ವರ್‌ ಮತ್ತು ಅವರ ಕುಟುಂಬ ಸದಸ್ಯರು, ಆಪ್ತರು, ಸಂಬಂಧಿಕರ ಬ್ಯಾಂಕ್‌ ಖಾತೆಗಳು ಮತ್ತು ಲಾಕರ್‌ಗಳನ್ನು ಐಟಿ ಅಧಿಕಾರಿಗಳು ಫ್ರೀಜ್‌ ಮಾಡಿದ್ದಾರೆ. ತನಿಖೆ ಮುಕ್ತಾಯದವರೆಗೂ ದಿನನಿತ್ಯದ ಖರ್ಚುಗಳಿಗೆ ಹೊರತುಪಡಿಸಿ ಉಳಿದ ಯಾವುದೇ ಉದ್ದೇಶಕ್ಕೂ ಹಣ ಬಳಸಲು ಪರಮೇಶ್ವರ್‌ ಅವರಿಗೆ ಅಧಿಕಾರವಿಲ್ಲ ಎಂದು ತಿಳಿದು ಬಂದಿದೆ.

ಶುಕ್ರವಾರ ದೇಗುಲದಲ್ಲಿ ಪೂಜೆ ಮಾಡಿಸಿ, ಸಾಹೇಬರಿಗೆ ಪ್ರಸಾದ ಕೊಡಲು ಪರಮೇಶ್ವರ್‌ ಬೆಂಬಲಿಗರು ಅವರ ಮನೆ ಬಳಿ ಬಂದಿದ್ದರು, ಆದರೆ ಅವರಿಗೂ, ಕಾಂಗ್ರೆಸ್‌ ಕಾರ್ಯಕರ್ತರಿಗೂ ಮನೆ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ವಾಪಸ್‌ ಕಳುಹಿಸಿದ್ದಾರೆ.

Comments are closed.