ಕರ್ನಾಟಕ

ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳಗೆರೆ ‘ಬಿಗ್ ಬಾಸ್- ಕನ್ನಡ’ ಮನೆ ಪ್ರವೇಶಿಸುವುದು ಖಾತ್ರಿ

Pinterest LinkedIn Tumblr

ಬೆಂಗಳೂರು : ಹಿರಿಯ ಪತ್ರಕರ್ತ- ಹಾಯ್ ಬೆಂಗಳೂರ್ ಹಾಗೂ ಓ ಮನಸೇ ಸಂಪಾದಕ ರವಿ ಬೆಳಗೆರೆ ‘ಬಿಗ್ ಬಾಸ್- ಕನ್ನಡ’ ಮನೆ ಪ್ರವೇಶಿಸುವುದು ಖಾತ್ರಿ ಆಗಿದೆ. ಈ ವಿಚಾರವು ವಿವಿಧ ಮೂಲಗಳಿಂದ ಖಚಿತವಾಗಿದೆ. ಕಲರ್ ಫುಲ್ ವ್ಯಕ್ತಿತ್ವದ ರವಿ ಬೆಳಗೆರೆ ಪತ್ರಿಕೋದ್ಯಮ, ಶಾಲೆ, ರೇಡಿಯೋ, ಸಿನಿಮಾ, ಯೂ ಟ್ಯೂಬ್ ಹೀಗೆ ನಾನಾ ಮಾಧ್ಯಮಗಳ ಮೂಲಕ ಜನಪ್ರಿಯರು.

ಅಷ್ಟೇ ಅಲ್ಲ, ವಿವಾದಗಳಿಂದಲೂ ರವಿ ಬೆಳಗೆರೆ ಅವರು ಹೊರತಾಗಿಲ್ಲ. ಇತ್ತೀಚೆಗೆ ‘ಬೆಳ್ ಬೆಳಗ್ಗೆ ಬೆಳಗೆರೆ’ ಎಂಬ ಯೂ ಟ್ಯೂಬ್ ನ ತಮ್ಮ ಸ್ವಂತ ಚಾನೆಲ್ ಕಾರ್ಯಕ್ರಮದ ಮೂಲಕವೂ ಅವರು ಸುದ್ದಿಯಲ್ಲಿ ಇದ್ದಾರೆ. ಆದರೆ ಬಿಗ್ ಬಾಸ್ ಮನೆಯೊಳಗೆ ಎಷ್ಟು ದಿನ ರವಿ ಬೆಳಗೆರೆ ಇರಬಲ್ಲರು ಎಂಬುದು ಸದ್ಯದ ಪ್ರಶ್ನೆ.

ಬಿಗ್ ಬಾಸ್ ನ ಈ ಹಿಂದಿನ ಅವತರಣಿಕೆಯಲ್ಲಿ ರವಿ ಬೆಳಗೆರೆ ಅವರ ಮಗಳು ಭಾವನಾ ಬೆಳಗೆರೆ ಸಹ ಭಾಗವಹಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬಿಗ್ ಬಾಸ್ ಮನೆಯೊಳಗೆ ಜಗಳ- ವಾಗ್ವಾದ, ರಂಪ- ರಾದ್ಧಾಂತಗಳು ನೋಡುತ್ತಾ ಬಂದಿದ್ದೇವೆ. ಇಂಥ ಸನ್ನಿವೇಶದಲ್ಲಿ ರವಿ ಬೆಳಗೆರೆ ಪ್ರವೇಶದಿಂದ ಈ ರಿಯಾಲಿಟಿ ಶೋ ಇನ್ನಷ್ಟು ರಂಗೇರುವುದರಲ್ಲಿ ಅನುಮಾನ ಇಲ್ಲ.

ಆದರೆ, ಬಿಗ್ ಬಾಸ್ ಮನೆಯ ಶಿಸ್ತು, ಊಟ- ತಿಂಡಿ, ಟಾಸ್ಕ್ ಗಳು… ಇವೆಲ್ಲವುಗಳಿಗೆ ರವಿ ಬೆಳಗೆರೆ ಅವರು ಒಗ್ಗಿಕೊಳ್ಳಲು ಸಾಧ್ಯವಾ? ಅಕ್ಟೋಬರ್ ಹದಿಮೂರನೇ ತಾರೀಕಿನ ಭಾನುವಾರದಂದು ಸ್ಪರ್ಧಿಗಳು ಬಿಗ್ ಬಾಸ್ ಮನೆಗಳು ಮನೆಯೊಳಗೆ ಪ್ರವೇಶ ಮಾಡಲಿದ್ದು, ಆ ನಂತರ ಉತ್ತರ ಸಿಗಲಿದೆ.

ಅಂದ ಹಾಗೆ, ಬಿಗ್ ಬಾಸ್ ಸ್ಪರ್ಧಿಯಾಗಿ ರವಿ ಬೆಳಗೆರೆ ಅವರು ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಬಂದಾಗ, ಈ ಬಗ್ಗೆ ಅವರನ್ನೇ ಒನ್ ಇಂಡಿಯಾ ಕನ್ನಡದಿಂದ ಪ್ರಶ್ನಿಸಲಾಗಿತ್ತು. ಆಗ ತಾವು ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದರು. ಶುಕ್ರವಾರದಂದು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ.

ಬಹುತೇಕ ಎಲ್ಲ ಕ್ರಿಯೇಟಿವ್ ಕ್ಷೇತ್ರಗಳಲ್ಲಿ ತಮ್ಮದೊಂದು ಛಾಪು ಮೂಡಿಸಿರುವ ರವಿ ಬೆಳಗೆರೆ ಅವರು ಬಿಗ್ ಬಾಸ್ ಗೆ ಸ್ಪರ್ಧೆ ಮಾಡುವುದನ್ನು ನಮ್ಮದೇ ಮೂಲಗಳು ಖಚಿತಪಡಿಸಿವೆ. ಅವರ ‘ಬಿಗ್ ಬಾಸ್’ ಪ್ರವೇಶದ ಹಿಂದಿನ ಲೆಕ್ಕಾಚಾರಗಳು ಏನಿದೆಯೋ? ಆದರೂ ಅವರಿಗೆ ‘ಬೆಸ್ಟ್ ಆಫ್ ಲಕ್’.

Comments are closed.