ಕರ್ನಾಟಕ

ಪ್ಲಾಸ್ಟಿಕ್​ ನಿಷೇಧ; ಬೆಂಗಳೂರಿನಲ್ಲಿ ಬಿಬಿಎಂಪಿ ಸಂಗ್ರಹಿಸಿದ ದಂಡವೆಷ್ಟು ಗೊತ್ತಾ?

Pinterest LinkedIn Tumblr


ಬೆಂಗಳೂರು (ಅ.6): ದೇಶದೆಲ್ಲೆಡೆ ಪ್ಲಾಸ್ಟಿಕ್ ಬ್ಯಾನ್ ಮಾಡಿದ ನಂತರ ಸಣ್ಣಪುಟ್ಟ ವ್ಯಾಪಾರಿಗಳು, ಗ್ರಾಹಕರು ಪರದಾಡುವಂತಾಗಿದೆ. ಅಂಗಡಿಗಳಲ್ಲಿ ಬಟ್ಟೆ ಬ್ಯಾಗ್​ಗಳು ಸಿಗದೆ, ಇತ್ತ ಪ್ಲಾಸ್ಟಿಕ್​ ಕವರ್​ಗಳನ್ನು ಬಳಸಲು ಅವಕಾಶವಿಲ್ಲದೆ ಕೆಲವು ದಿನಗಳ ಕಾಲ ಸಮಸ್ಯೆ ಎದುರಾಗಿತ್ತು. ಪ್ಲಾಸ್ಟಿಕ್ ಕವರ್​ಗಳನ್ನು ಬಳಸುವವರಿಗೆ ಬಿಬಿಎಂಪಿ ದಂಡ ಹಾಕುತ್ತಿದ್ದು, ಇದುವರೆಗೂ ಸಂಗ್ರಹವಾಗಿರುವ ಮೊತ್ತ ಕೇಳಿದರೆ ಶಾಕ್ ಆಗುತ್ತೀರ.

ಬಿಬಿಎಂಪಿಯ ಮಾರ್ಷಲ್​ಗಳು ಮತ್ತು ಆರೋಗ್ಯಾಧಿಕಾರಿಗಳು ಇದುವರೆಗೂ ತ್ಯಾಜ್ಯ ನಿರ್ವಹಣೆಯನ್ನು ಉಲ್ಲಂಘಿಸಿದ್ದಕ್ಕೆ 1,129 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಹಾಗೇ, ಪ್ಲಾಸ್ಟಿಕ್ ನಿಷೇಧದ ನಡುವೆಯೂ ಪ್ಲಾಸ್ಟಿಕ್ ಬಳಸಿದ್ದಕ್ಕೆ 774 ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ ದಂಡದ ರೂಪದಲ್ಲಿ 14.3 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಒಂದು ತಿಂಗಳಲ್ಲಿ ಬಿಬಿಎಂಪಿ ಇದುವರೆಗೂ ಸಂಗ್ರಹಿಸಿದ ಎಲ್ಲ ದಂಡಗಳಿಗಿಂತ ಈ ದಂಡದ ಪ್ರಮಾಣ ಅತ್ಯಧಿಕವಾಗಿದೆ. ಬೆಂಗಳೂರನ್ನು ಪ್ಲಾಸ್ಟಿಕ್​ಮುಕ್ತಗೊಳಿಸಲು ಸಾಕಷ್ಟು ಸಂಘಟನೆಗಳು, ಸ್ವಯಂಸೇವಕರು, ಸ್ಥಳೀಯರು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅಭಿಯಾನವನ್ನೂ ಶುರುಮಾಡಿದ್ದಾರೆ. ಸುಂದರವಾದ ಬೆಂಗಳೂರನ್ನು ನಿರ್ಮಿಸಲು ವೈಟ್​ಫೀಲ್ಡ್​ ರೈಸಿಂಗ್, ದೊಡ್ಡನೆಕ್ಕುಂದಿ ರೈಸಿಂಗ್, ಹೆಚ್​ಎಸ್​ಆರ್​ ಸಿಟಿಜನ್ ಫೋರಂ ಮುಂತಾದ ತಂಡಗಳು ಕೈಜೋಡಿಸಿವೆ.

ಹಾಗೇ, ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮತ್ತು ಮಾರ್ಷಲ್​ಗಳು ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಮಾಡದಂತೆ ಜಾಗೃತಿ ಮೂಡಿಸುತ್ತಿವೆ. ಫುಟ್​ಪಾತ್​ಗಳಲ್ಲಿ ಗಲೀಜು ಮಾಡುವವರಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಸದ್ಯಕ್ಕೆ ದೊಡ್ಡ ಅಂಗಡಿಗಳಲ್ಲಿ ಮಾತ್ರವಲ್ಲದೆ ಚಿಕ್ಕಪುಟ್ಟ ಅಂಗಡಿ ಮತ್ತು ಫುಟ್​ಪಾತ್​ ಬದಿಯ ವ್ಯಾಪಾರಿಗಳಿಗೂ ಪ್ಲಾಸ್ಟಿಕ್ ಬಳಸದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಸ್ತುಗಳನ್ನು ಪೇಪರ್​ನಲ್ಲಿ ಸುತ್ತಿ ಅಥವಾ ಪೇಪರ್ ಬ್ಯಾಗ್​ನಲ್ಲಿ ನೀಡಲಾಗುತ್ತಿದೆ.

Comments are closed.