
ಬೆಂಗಳೂರು: ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗಣ್ಯ ವ್ಯಕ್ತಿಗಳ ಫೊನ್ ಕದ್ದಾಲಿಕೆ ಪ್ರಕರಣ ಮತ್ತು ಐಎಂಎ ಬಹುಕೋಟಿ ವಂಚನೆ ಹಗರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಐಪಿಸಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಅಲೋಕ್ ಕುಮಾರ್ ಅವರ ಜಾನ್ಸನ್ ಮಾರ್ಕೆಟ್ ಬಳಿಯ ನಿವಾಸಕ್ಕೆ ಸಿಬಿಐನ ಸುಮಾರು 20 ಮಂದಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ದಿಢೀರ್ ದಾಳಿ ನಡೆಸಿದೆ.
ಬೆಳಗ್ಗೆ 7.30ರಿಂದ ಅಲೋಕ್ ಕುಮಾರ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಲೋಕ್ ಕುಮಾರ್, ಆಡಿಯೋ ರೆಕಾರ್ಡ್ ಕಾಪಿ ಮಾಡಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರ ಮನೆಯಲ್ಲಿ ಪೆನ್ ಡ್ರೈವ್ ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪ್ರಕರಣವನ್ನು ರಾಜ್ಯದ ಬಿಜೆಪಿ ಸರ್ಕಾರ ಇತ್ತೀಚೆಗೆ ಸಿಬಿಐಗೆ ವಹಿಸಿತ್ತು. ಮೈತ್ರಿ ಸರ್ಕಾರದಲ್ಲಿ ಪೊಲೀಸ್ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಅವರನ್ನು 6 ತಿಂಗಳೊಳಗೆ ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ಬಿಜೆಪಿ ಸರ್ಕಾರ ಭಾಸ್ಕರ್ ರಾವ್ ಅವರ ನೇಮಕ ಮಾಡಿತ್ತು. ಇದಾದ ಮೇಲೆ ದೂರವಾಣಿ ಕದ್ದಾಲಿಕೆ ಪ್ರಕರಣ ಮುನ್ನೆಲೆಗೆ ಬಂದಿತ್ತು. ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರು ಸಹ ತಳುಕು ಹಾಕಿಕೊಂಡಿದ್ದು, ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.
ಸುಮಾರು ಹದಿನೈದು ದಿನಗಳ ಹಿಂದೆ ಖಾಸಗಿ ಸಿಮ್ ಕಂಪನಿಗಳಿಗೆ ಕೆಲ ವಿವರಗಳನ್ನು ಕೋರಿ ಸಿಬಿಐ ಅಧಿಕಾರಿಗಳು ನೊಟೀಸ್ ನೀಡಿದ್ದರು. ಸಿಬಿಐ ಅಧಿಕಾರಿಗಳ ಕಾರ್ಯಾಚರಣೆ ವೇಗ ಪಡೆದಿದ್ದು, ಸೆ 2ರಂದು ಪೊಲೀಸ್ ಆಯುಕ್ತರು ಮತ್ತು ಜಂಟಿ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದ ಕೆಲ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ್ದರು. ಏರ್ಟೆಲ್, ಜಿಯೋ, ವೊಡಾಫೋನ್ ಸೇರಿದಂತೆ ಹಲವು ಸಿಮ್ ಕಂಪನಿಗಳನ್ನು ಸಂಪರ್ಕಿಸಿರುವ ಸಿಬಿಐ ಅಧಿಕಾರಿಗಳು, 2018ರ ಆಗಸ್ಟ್ನಿಂದ ಈವರೆಗೆ ಯಾವ್ಯಾವ ನಂಬರ್ ಟ್ಯಾಪ್ ಆಗಿದೆ, ಯಾವ ಅಧಿಕಾರಿಗಳ ಹೆಸರಲ್ಲಿ ಟ್ಯಾಪಿಂಗ್ಗೆ ಅನುಮತಿ ಪಡೆಯಲಾಗಿದೆ, ಕೋರಿಕೆ ಪತ್ರದಲ್ಲಿ ಯಾವ ಪ್ರಕರಣ ನಮೂದು ಮಾಡಿದ್ದಾರೆ ಇತ್ಯಾದಿ ಮಾಹಿತಿಯನ್ನು ಕೋರಿ ಸಿಮ್ ಕಂಪನಿಗಳಿಗೆ ನೋಟೀಸ್ ನೀಡಲಾಗಿದೆ. ಇದರ ಜೊತೆಗೆ ಕೆಲ ನಂಬರ್ಗಳ ಕಾಲ್ ರೆಕಾರ್ಡ್ ಕೂಡ ನೀಡುವಂತೆ ಸಿಬಿಐ ಅಧಿಕಾರಿಗಳು ಕೋರಿದ್ದಾರೆ.
ಬೆಂಗಳೂರು ಪೊಲೀಸರು ಹಾಗೂ ಸಿಸಿಬಿಯಿಂದ ಎಷ್ಟು ನಂಬರ್ಗಳ ರೆಕಾರ್ಡ್ ನೀಡುವಂತೆ ಕೋರಿಕೆ ಸಲ್ಲಿಸಿದ್ದರು ಎನ್ನುವ ಬಗ್ಗೆ ಮಾಹಿತಿ ನೀಡಲು ಸಿಬಿಐ ಮನವಿ ಮಾಡಿದೆ. ಕೇವಲ ಮೊಬೈಲ್ ಸಂಸ್ಥೆಗಳಿಗೆ ನೋಟಿಸ್ ನೀಡುವುದು ಮಾತ್ರವಲ್ಲ ಟೆಕ್ನಿಕಲ್ ಸೆಲ್ ಸಿಸ್ಟಮ್ನಲ್ಲಿರುವ ಎಲ್ಲಾ ಸಾಫ್ಟ್ವೇರ್ ಮತ್ತು ಹಾರ್ಡ್ ಡಿಸ್ಕ್ಗಳನ್ನು ಸಿಬಿಐ ತನ್ನ ವಶಕ್ಕೆ ಪಡೆದಿದೆ.
ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಕೆಲವು ದಿನಗಳಿಂದ ವಿಚಾರಣೆಗೆ ಒಳಪಡಿಸುತ್ತದೆ ಎಂಬ ಸುದ್ದಿ ಕೇಳಿಬಂದಿತ್ತು. ಆಡುಗೋಡಿಯ ಸಿಸಿಬಿ ಟೆಕ್ನಿಕಲ್ ವಿಂಗ್ನಿಂದ ಆಡಿಯೋವನ್ನು ಪೆನ್ಡ್ರೈವ್ಗೆ ಹಾಕಿ ಆಗಸ್ಟ್ 2ರಂದು ಪೊಲೀಸ್ ಆಯುಕ್ತರ ಕಚೇರಿಗೆ ನೀಡಲಾಗಿದೆ ಎಂದು ಸಿಸಿಬಿ ವರದಿ ನೀಡಿತ್ತು. ಇದೇ ವರದಿಯ ಅಧಾರದಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವರ್ಗಾವಣೆ ಮಾಡಿತ್ತು. ಹೀಗಾಗಿ ಸೆ 3 ರಂದು ಅಲೋಕ್ ಕುಮಾರ್ ಅವರನ್ನು ಸಿಬಿಐ ವಿಚಾರಣೆ ಮಾಡಿತ್ತು.
ಇನ್ನು ಐಎಂಎ ಬಹುಕೋಟಿ ವಂಚನೆ ಹಗರಣದ ರೂವಾರಿ, ಕಂಪೆನಿ ಸ್ಥಾಪಕ ಮನ್ಸೂರ್ ಖಾನ್ ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ಅವ್ಯವಹಾರದಲ್ಲಿ ಹಲವು ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಭಾಗಿಯಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದು ತನಿಖೆ ನಡೆಸುತ್ತಿರುವ ಸಿಬಿಐ ಈ ಬಗ್ಗೆ ಪ್ರಾಥಮಿಕ ಆರೋಪಪಟ್ಟಿಯನ್ನು ಈಗಾಗಲೇ ಸಲ್ಲಿಸಿದೆ.
Comments are closed.