ಕರ್ನಾಟಕ

ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್; ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನದ ಹೊಗೆ

Pinterest LinkedIn Tumblr

ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಪಕ್ಷ ಎದುರು ನೋಡುತ್ತಿರುವುದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಪಕ್ಷದ ಅಭ್ಯರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನರ್ಹ ಶಾಸಕರ ಕುಟುಂಬಗಳಿಗೆ ಟಿಕೆಟ್ ನೀಡುವ ಪಕ್ಷದ ನಿರ್ಧಾರದ ವಿರುದ್ಧ ಉಪ ಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪಕ್ಷದ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಕುಟುಂಬಕ್ಕೆ ಟಿಕೆಟ್ ನೀಡಿದರೆ ಮುಂದಿನ ಕಾರ್ಯತಂತ್ರ ರೂಪಿಸಲು ಬಿಜೆಪಿ ಮುಖಂಡ ಶರತ್ ಬಚ್ಚೇಗೌಡ ಸ್ಥಳೀಯ ಮುಖಂಡರ ಸಭೆ ಕರೆದಿದ್ದಾರೆ. ಶಿವಾಜಿನಗರ ಕ್ಷೇತ್ರದಿಂದ ರೋಷನ್ ಬೇಗ್ ಗೆ ಟಿಕೆಟ್ ನೀಡಲು ಪಕ್ಷದ ಹಿರಿಯ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಿಂದ ಬಿಸಿ ಪಾಟೀಲ್ ಗೆ ಟಿಕೆಟ್ ನೀಡಿದರೆ ಹಿರಿಯ ಮುಖಂಡ ಯುಬಿ ಬಣಕಾರ್ ಬಂಡಾಯದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

15 ಕ್ಷೇತ್ರಗಳ ಕೆಲ ಬಿಜೆಪಿ ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಸಂಪರ್ಕದಲ್ಲಿರುವುದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆತಂಕಕ್ಕೆ ತಳ್ಳಿದೆ.

ಟಿಕೆಟ್ ತಪ್ಪಿದಲ್ಲಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಸೋಲಿಸುವುದಾಗಿ ಕೆಲವು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ನಿನ್ನೆ ರಾತ್ರಿ ನಡೆದ ಕೋರ್ ಕಮಿಟಿ ಸಭೆಯಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಗಳಿಗೆ ಸ್ಪಷ್ಟ ಸಂದೇಶ ನೀಡುವಲ್ಲಿ ಸಾಧ್ಯವಾಗಲಿಲ್ಲ.ಅನರ್ಹ ಶಾಸಕರ ಭವಿಷ್ಯ ಕುರಿತ ಸುಪ್ರೀಂಕೋರ್ಟ್ ಆದೇಶಕ್ಕಾಗಿ ವರಿಷ್ಠರು ಕಾಯುತ್ತಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ಬೆಳವಣಿಗೆ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ 13 ರಲ್ಲಿ ಗೆಲ್ಲಬೇಕೆಂದುಕೊಂಡಿರುವ ಬಿಜೆಪಿಗೆ ಶಾಕ್ ನೀಡಿದೆ.

Comments are closed.