ಕರ್ನಾಟಕ

ಇಂಗ್ಲಿಷ್​ ಬೇಕು ಅಂತಾರೆ, ಹಿಂದಿ ಕಲಿಯಬೇಕು ಅಂತ ಹೇಳಿದರೆ ಯಾಕಿಷ್ಟು ವಿರೋಧ ಮಾಡುತ್ತಾರೆ: ಕನ್ನಡಗರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನೆ

Pinterest LinkedIn Tumblr

ಧಾರವಾಡ: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ‘ಒಂದು ದೇಶ ಒಂದು ಭಾಷೆ’ ವಿಚಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ.

“ಹಿಂದಿ ಬೇಡ, ಆದರೆ ಇಂಗ್ಲೀಷ್ ಬೇಕು ಅಂತಾ ಕೆಲವರು ಹೇಳುತ್ತಾರೆ. ಅವರ ತಾತ ಮುತ್ತಾತರೇನು ಇಂಗ್ಲೀಷನವರೇನು..? ಎಲ್ಲರೂ ಹಿಂದಿ ಕಲಿಯಬೇಕು ಅಂತಾ ಅಮಿತ್​ ಶಾ ಹೇಳಿದ್ದಾರೆ. ಅದರರ್ಥ ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಇಲ್ಲ,” ಎಂದು ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿಚಾರವನ್ನು ಸಮರ್ಥನೆ ಮಾಡಿಕೊಂಡರು. “ಇಂಗ್ಲೀಷ್ ಕಲಿಯಲು ತಯಾರಿದ್ದೇವೆ, ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಸ್ವಾಗತಿಸುವ ಒಂದು ವರ್ಗ ಕೂಡ ಇದೆ. ಆದರೆ ಹಿಂದಿ ಕಲಿಯಬೇಕು ಅಂತ ಹೇಳಿದರೆ ಯಾಕಿಷ್ಟು ವಿರೋಧ ಮಾಡುತ್ತಾರೆ ಎಂದು ಗೊತ್ತಿಲ್ಲ. ಮೆಟ್ರೋದಲ್ಲಿ ಇಂಗ್ಲೀಷ್ ಬೋರ್ಡ್ ನಡೆಯುತ್ತೆ, ಹಿಂದಿ ಬೋರ್ಡ್ ತೆಗೆಯಬೇಕು ಅಂದರೆ ಯಾವ ನ್ಯಾಯ ಇದು?,” ಎಂದು ಪ್ರಶ್ನಿಸಿದರು.

ನೆರೆಗೆ ಪರಿಹಾರ ತರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರಲ್ಹಾದ್​ ಜೋಶಿ ತಿರುಗೇಟು ನೀಡಿದರು. “ಸಿದ್ದರಾಮಯ್ಯ ಬಹಳ ಸ್ಟ್ರಾಂಗ್, ಸಿಎಂ ಇದ್ದಾಗ ನಾವೇ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಮನಮೋಹನ್​ ಸಿಂಗ್ ಸರ್ಕಾರ ಇದ್ದಾಗ ಎಷ್ಟು ಕೊಟ್ಟಿದ್ದರು, ನಾವೆಷ್ಟು ಕೊಟ್ಟಿದೇವೆ ಅಂತಾ ಟ್ರ್ಯಾಕ್ ರೆಕಾರ್ಡ್ ನೋಡಲಿ. ಸದ್ಯ ಹತ್ತು ರಾಜ್ಯಗಳಲ್ಲಿ ನೆರೆ ಬಂದಿದೆ. ಹೀಗಾಗಿ ನೆರೆ ಪರಿಹಾರ ಬರುವುದು ವಿಳಂಬ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರ ಬಗ್ಗೆ ಮತ್ತೊಮ್ಮೆ ಮಾತನಾಡಿ ಒತ್ತಡ ಹಾಕುತ್ತೇವೆ,” ಎಂದು ಹೇಳಿದರು.

ಇನ್ನು, ಮಾಜಿ ಸಚಿವ ಡಿಕೆಶಿ ಬಂಧನದ ಬಗ್ಗೆ ಮಾತನಾಡಿದ ಜೋಶಿ, “ಡಿಕೆಶಿ ಪ್ರಕರಣದಲ್ಲಿ ಏನು ರಾಜಕೀಯ ಮಾಡುತ್ತಿದ್ದೇವೆ ಅಂತಾ ಸ್ಪಷ್ಟಪಡಿಸಲಿ. ಒಂದು ಜನಾಂಗದ ಕೆಲವರನ್ನು ಕರೆದುಕೊಂಡು ಹೋಗಿ ಪ್ರತಿಭಟಿಸುವ ಪ್ರಯತ್ನವನ್ನೂ ಮಾಡಿದರು.
ಡಿಕೆಶಿಗೆ ನೂರಾರು ಕೋಟಿ ಯಾವಾಗ ಎಲ್ಲಿಂದ ಬಂತು ಜನರಿಗೆ ತಿಳಿಸಬೇಕು. ಹೈ ಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಇವರ ಜಾಮೀನನ್ನು ರದ್ದು ಮಾಡಿವೆ. ಹೀಗಿರುವಾಗ ಹೇಗೆ ರಾಜಕೀಯ ಅಂತಾ ಕಾಂಗ್ರೆಸ್ ಹೇಳುತ್ತದೆ,” ಎಂದು ಪ್ರಶ್ನೆ ಮಾಡಿದರು.

ದುಬೈನಲ್ಲಿ ತೈಲ ಘಟಕಗಳ ಡ್ರೋನ್​​​ ದಾಳಿ ವಿಚಾರವಾಗಿ, ದುಬೈ ನಮಗೆ ತೈಲ ಪೂರೈಸುವ ರಾಷ್ಟ್ರ. ಆದರೂ ನಮಗೆ ಬೇರೆ ಬೇರೆ ತೈಲ ಮೂಲಗಳು ಇವೆ. ಇಂತಹ ಕೃತ್ಯವನ್ನು ನಾವು ಖಂಡಿಸಬೇಕು ಎಂದು ಹೇಳಿದರು.

“ಮಹದಾಯಿ ವಿವಾದವನ್ನು ಗೋವಾ ಸಿಎಂ ನ್ಯಾಯಾಲಯದ ಮೂಲಕವೇ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಆದರೂ ನಾವು ಜಲಮಂತ್ರಿಗಳ ಮೂಲ‌ಕ ಇನ್ನೂ ಮೂರು ಸಿಎಂಗಳ ಮಾತುಕತೆಗೆ ಪ್ರಯತ್ನಿಸುತ್ತೇವೆ. ಮೂರು ರಾಜ್ಯದಲ್ಲಿ ಒಂದೇ ಪಕ್ಷ ಇದ್ದ ಮಾತ್ರಕ್ಕೆ ಸಮಸ್ಯೆ ಇತ್ಯರ್ಥವಾಗದು,” ಎಂದರು.

Comments are closed.