ರಾಷ್ಟ್ರೀಯ

ಹೊಸ ಸಂಚಾರಿ ನಿಯಮದಿಂದ ಬೇಸತ್ತು ಹೋದ ಸವಾರರಿಗೆ ಆಂಧ್ರ ಪೊಲೀಸರು ಕೊಟ್ಟ ವಿಶೇಷ ಕೊಡುಗೆ ನೋಡಿ….

Pinterest LinkedIn Tumblr

ಹೈದರಾಬಾದ್: ನೂತನ ಸಂಚಾರಿ ನಿಯಮಗಳು ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರನ್ನು ಕಂಡರೆ ಜನ ಹೌಹಾರುತ್ತಿದ್ದು, ದುಬಾರಿ ದಂಡಕ್ಕೆ ಬೆಚ್ಚಿ ಬೀಳುತ್ತಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಆಂಧ್ರ ಪ್ರದೇಶ ಪೊಲೀಸರ ಕ್ರಮ ಜನರನ್ನು ಅಚ್ಚರಿಗೊಳಿಸಿದೆ.

ಇಷ್ಟು ದಿನ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬೀಳುತ್ತಿದ್ದ ಸವಾರರಿಗೆ ದುಬಾರಿ ದಂಡ ವಿಧಿಸುತ್ತಿದ್ದ ಪೊಲೀಸರು ವಾಹನ ಸವಾರರಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆ ಅಚ್ಚರಿ ಬೇರೇನೂ ಅಲ್ಲ. ಹೆಲ್ಮೆಟ್ ಇಲ್ಲದೇ ಗಾಡಿ ಚಲಾಯಿಸುತ್ತಿದ್ದ ಸವಾರರಿಗೆ ಸ್ಥಳದಲ್ಲೇ ದಂಡ ವಸೂಲಿ ಮಾಡಿ ದಂಡದಿಂದ ಹೆಲ್ಮೆಟ್ ಖರೀದಿ ಮಾಡಿ ಸವಾರರಿಗೆ ನೀಡುತ್ತಿದ್ದಾರೆ. ಅಂತೆಯೇ ಸೂಕ್ತ ದಾಖಲೆಗಳಲ್ಲಿದ ವಾಹನ ಸವಾರರಿಂದ ವಸೂಲಾಗುವ ದಂಡದಿಂದ ಸೂಕ್ತ ದಾಖಲೆಗಳನ್ನು ಪಡೆಯಲು ಸಹಕರಿಸುತ್ತಿದ್ದಾರೆ.

ಆ ಮೂಲಕ ತಾವು ದಂಡವನ್ನು ಮಾತ್ರವಲ್ಲ ಇಂತಹ ಸಮಾಜ ಸೇವಾ ಕಾರ್ಯದಲ್ಲೂ ತೊಡಗುವ ಮೂಲಕ ಜನರ ಅಚ್ಚರಿಗೆ ಕಾರಣರಾಗಿದ್ದಾರೆ. ರಚ್ಚಕೊಂಡ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈ ಕುರಿತಂತೆ ಮಾತನಾಡಿರುವ ಹೈದರಾಬಾದ್ ಸಂಚಾರಿ ಪೊಲೀಸ್ ಉಪ ಆಯುಕ್ತರಾದ ದಿವ್ಯ ಚರಣ್ ರಾವ್ ಅವರು, ಸಂಚಾರಿ ಪೊಲೀಸರ ಕುರಿತು ಜನರಲ್ಲಿ ತಪ್ಪು ಭಾವನೆ ಸೃಷ್ಟಿಯಾಗಿದೆ. ದುಬಾರಿ ಹಣ ಕಿತ್ತು ಜನರಿಂದ ಲೂಟಿ ಮಾಡುತ್ತಿದ್ದಾರೆ ಎಂದು ತಪ್ಪು ತಪ್ಪಾಗಿ ಭಾವಿಸಿದ್ದಾರೆ. ಆದರೆ ಸಂಚಾರಿ ನಿಯಮ ಉಲ್ಲಂಘನೆಯಿಂದಾಗಿ ಅವರಿಗೇ ತೊಂದರೆ. ದಂಡ ಮಾತ್ರವಲ್ಲದೇ ತಮ್ಮ ಸುರಕ್ಷತೆ ಕುರಿತು ಕೂಡ ಅವರು ಆಲೋಚಿಸಬೇಕು ಎಂದು ಹೇಳಿದರು. ಹೀಗಾಗಿ ನಾವು ಸವಾರರಿಂದ ದಂಡ ವಸೂಲಿ ಮಾಡಿ ಅದೇ ಹಣದಿಂದ ಹೆಲ್ಮೆಟ್ ಮತ್ತು ಸೂಕ್ತದಾಖಲೆಗಳನ್ನು ಒದಗಿಸಿ ಅವರು ಮತ್ತೆ ಭವಿಷ್ಯದಲ್ಲಿ ದಂಡ ಕಟ್ಟದಂತೆ ಮಾಡಿದ್ದೇವೆ ಎಂದು ಹೇಳಿದರು.

ಇನ್ನು ಪೊಲೀಸರ ಈ ಕ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಸ್ವತಃ ತೆಲಂಗಾಣದ ನಗರಾಭಿವೃದ್ಧಿ ಸಚಿವ ಹಾಗೂ ಸಿಎಂ ಕೆಸಿಆರ್ ಪುತ್ರ ಕೆಟಿ ರಾಮಾರಾವ್ ಅವರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Comments are closed.