ಕರ್ನಾಟಕ

6 ಶಾಸಕರಿಂದ ಜೆಡಿಎಸ್‌ಗೆ ವಿದಾಯ?

Pinterest LinkedIn Tumblr


ಬೆಂಗಳೂರು: “ಕುಟುಂಬ ರಾಜಕಾರಣ’ ಜೆಡಿಎಸ್‌ನೊಳಗೆ ಆಂತರಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಇನ್ನೂ ಆರು ಮಂದಿ ಶಾಸಕರು ಪಕ್ಷ ತೊರೆಯುವ ಮಾತುಗಳು ಕೇಳಿಬರುತ್ತಿವೆ.

ಈಗಾಗಲೇ ಮೂವರು ಶಾಸಕರು ಪಕ್ಷ ತೊರೆದು ಕುಮಾರಸ್ವಾಮಿ ಸರಕಾರ ಪತನಕ್ಕೆ ಕಾರಣರಾಗಿದ್ದು, ಇನ್ನೂ ಆರು ಶಾಸಕರು ಬಿಜೆಪಿ ಸೇರ್ಪಡೆಯಾಗಿ ಪಕ್ಷಕ್ಕೆ ಮುಜುಗರ ತರಲಿದ್ದಾರೆ ಎಂದು ಹೇಳಲಾಗಿದೆ.

ಕುಟುಂಬ ರಾಜಕಾರಣ ಹಿನ್ನೆಲೆಯಲ್ಲಿ ಈಗಾಗಲೇ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿರುವ ಮಾಜಿ ಸಚಿವರಾದ ಜಿ.ಟಿ. ದೇವೇಗೌಡ ಹಾಗೂ ಎಸ್‌.ಆರ್‌. ಶ್ರೀನಿವಾಸ್‌ ಸಹಿತ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್‌ಗೌಡ, ಶಿರಾ ಶಾಸಕ ಸತ್ಯನಾರಾಯಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪಕ್ಷ ಬಿಡುವ ಸೂಚನೆ ಇದೆ. ಈ ಹಿಂದೆಯೂ ಇವರು ಪಕ್ಷ ಬಿಡಲು ಬಿಜೆಪಿ ಜತೆ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ.

ತಳ್ಳಿ ಹಾಕಿದ ಶಾಸಕರು
ಶಿರಾ ಶಾಸಕ ಸತ್ಯನಾರಾಯಣ, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ ನಾವ್ಯಾಕೆ ಪಕ್ಷ ಬಿಡೋಣ, ಅಂತಹ ಪ್ರಸ್ತಾವನೆಯೇ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ. ಮತ್ತೂಂದು ಮೂಲಗಳ ಪ್ರಕಾರ ಬಿಜೆಪಿ ಕೇಂದ್ರ ನಾಯಕರು ಜೆಡಿಎಸ್‌ ಶಾಸಕರನ್ನು ಸೆಳೆಯುವುದಕ್ಕೆ ಸಮ್ಮತಿ ಸೂಚಿಸುತ್ತಿಲ್ಲ ಎಂದು ಹೇಳಲಾಗಿದೆ.

ಬರಿಗೈಯಲ್ಲಿ ಸಿದ್ದು ವಾಪಸ್‌
ವಿಪಕ್ಷ ನಾಯಕನ ಸ್ಥಾನ ಹಾಗೂ ಪಕ್ಷದ ಪದಾಧಿಕಾರಿಗಳ ಬದಲಾವಣೆ ಕುರಿತು ಚರ್ಚಿಸಲು ದಿಲ್ಲಿಗೆ ತೆರಳಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಗೆ ಅವಕಾಶ ಸಿಗದೆ ವಾಪಸ್‌ ಬಂದಿದ್ದಾರೆ.

ಇಬ್ಬರೂ ನಾಯಕರು ವಿಪಕ್ಷ ನಾಯಕನ ಆಯ್ಕೆ, ಪಕ್ಷದ ಪದಾಧಿಕಾರಿಗಳ ನೇಮಕ ಕುರಿತಂತೆ ಚರ್ಚಿಸಿ ಅಂತಿಮಗೊಳಿಸಲು ನಿರ್ಧರಿಸಿದ್ದರು.
ಸೋನಿಯಾ ಗಾಂಧಿ ಪಕ್ಷದ ಬೇರೆ ಸಭೆಯಲ್ಲಿದ್ದುದರಿಂದ ಸಿದ್ದರಾಮಯ್ಯ ಭೇಟಿಗೆ ಅವಕಾಶ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಸೋನಿಯಾ ಗಾಂಧಿ ಭೇಟಿಗೆ ಶನಿವಾರ ಅವಕಾಶ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ ಶನಿವಾರ ಅನರ್ಹ ಶಾಸಕರ 17 ಕ್ಷೇತ್ರಗಳ ಉಪ ಚುನಾವಣೆ ಸಿದ್ದತೆ ಕುರಿತು ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿರುವುದರಿಂದ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಶುಕ್ರವಾರ ರಾತ್ರಿಯೇ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ ಎಂದು ತಿಳಿದು ಬಂದಿದೆ.

Comments are closed.