
ಹೊಸದಿಲ್ಲಿ: ಮಾದಕ ವಸ್ತು ಪತ್ತೆ ದಳ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬೃಹತ್ ಜಾಲವೊಂದನ್ನು ಬೇಧಿಸಿದ್ದಾರೆ. ಅಫ್ಘಾನ್ ಮತ್ತು ನೈಜೀರಿಯಾ ಮೂಲದ ಆರು ಜನರನ್ನು ಬಂಧಿಸಿದ್ದು, ಅವರಿಂದ 30 ಕೋಟಿಗೂ ಹೆಚ್ಚಿನ ಮೌಲ್ಯದ ಹೆರಾಯಿನ್ ವಶಪಡಿಸಲಾಗಿದೆ.
ಮಾದಕ ವಸ್ತು ಸಾಗಟದ ಸುಳಿವು ದೊರೆತಿದ್ದ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಗು ಭದ್ರತೆಯಿಂದ ತಪಾಸಣೆ ನಡೆಸಿದ್ದರು. ಆ ಸಮಯದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಿದ್ದ ಮೂವರು ಅಫ್ಘಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು. ಆದರೆ ಪ್ರಾಥಮಿಕ ವಿಚಾರಣೆಯಲ್ಲಿ ಯಾವುದೇ ವಸ್ತು ಪತ್ತೆಯಾಗದ ಹಿನ್ನಲೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಹೊಟ್ಟೆಯಲ್ಲಿ 253 ನಿಷೇಧಿತ ಅಫ್ಘಾನ್ ಹೆರಾಯಿನ್ ಉಂಡೆಗಳು ಪತ್ತೆಯಾಗಿದ್ದವು. ಶಸ್ತ್ರಚಿಕಿತ್ಸೆ ನಡೆಸಿ ಈ ವಸ್ತುಗಳನ್ನು ಹೊರತೆಗೆಯಲಾಗಿದ್ದು ಅವುಗಳು ಒಟ್ಟು 1.8 ಕೆಜಿ ತೂಗುತ್ತಿದ್ದವು ಎಂದು ವರದಿಯಾಗಿದೆ. ವಶಪಡಿಸಿಕೊಂಡ ಹೆರಾಯಿನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 30 ಕೋಟಿ ರೂಪಾಯಿಯಷ್ಟು ಮೌಲ್ಯದ್ದಾಗಿದೆ ಎಂದು ಅಧಿಕಾರಿಗಲು ತಿಳಿಸಿದ್ದಾರೆ.
ಮುಂದಿನ ವಿಚಾರಣೆಯಲ್ಲಿ ಅವರಿಂದ ಈ ಡ್ರಗ್ಸ್ ಪಡೆದುಕೊಳ್ಳಲಿದ್ದ ಮತ್ತೊಬ್ಬ ಅಫ್ಘಾನ್ ಪ್ರಜೆಯನ್ನು ಬಂಧಿಸಲಾಗಿದೆ. ಇದೇ ಜಾಲಕ್ಕೆ ಒಳಪಟ್ಟ ಮತ್ತಿಬ್ಬರು ನೈಜೀರಿಯಾ ಪ್ರಜೆಗಳನ್ನು ಕೂಡಾ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಅವರಿಂದ ದೆಹಲಿಯ ಮನೆಯೊಂದರಿಂದ 6.2 ಕೆಜಿ ಹೆರಾಯಿನ್ ವಶಪಡಿಸಲಾಗಿದೆ.
Comments are closed.