ಕರ್ನಾಟಕ

ಬೆಂಗಳೂರಿನಲ್ಲಿ ಯುವಕನೊಬ್ಬನ ಕೈಗೆ ನವಜಾತ ಶಿಶುವಿದ್ದ ಬ್ಯಾಗನ್ನು ಕೊಟ್ಟು ಪರಾರಿಯಾದ ಮಹಿಳೆ !

Pinterest LinkedIn Tumblr

ಬೆಂಗಳೂರು: ಎಳೆ ಮಕ್ಕಳನ್ನು ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಬಿಟ್ಟು ಹೋದ ಪ್ರಸಂಗವನ್ನು ನಾವು ಕೇಳಿರುತ್ತೇವೆ. ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಮಹಿಳೆ ಬ್ಯಾಗ್ ನಲ್ಲಿ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿಟ್ಟು ಅದನ್ನು ಯುವಕನೊಬ್ಬನ ಕೈಗೆ ಕೊಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ಕಳೆದ ಗುರುವಾರ ನಡೆದಿದೆ.

ಚಾಮರಾಜಪೇಟೆಯ ರಾಘವೇಂದ್ರ ಕಾಲೊನಿಯ ಕಾಲೇಜು ವಿದ್ಯಾರ್ಥಿ ಸಾಯಿ ಚರಣ್ ಮತ್ತು ಆತನ ಸ್ನೇಹಿತೆ ಲಕ್ಷ್ಮಿ ಪವನ್ ಅಲ್ಲೇ ಟಿಆರ್ ಮಿಲ್ ಸರ್ಕಲ್ ಬಳಿಯಿರುವ ಟೀ ಸ್ಟಾಲ್ ನಲ್ಲಿ ಮೊನ್ನೆ ಗುರುವಾರ ಬೆಳಗ್ಗೆ 11.15ರ ಹೊತ್ತಿಗೆ ಟೀ ಕುಡಿಯಲು ಹೋಗಿದ್ದರು. ಈ ವೇಳೆ ಸುಮಾರು 30 ವರ್ಷದ ಕೆಂಪು ಸಾರಿ ಉಟ್ಟುಕೊಂಡು ಬಂದ ಮಹಿಳೆ, ಚರಣ್ ಬಳಿ ಬಂದು ನಾನು ನೀರು ಕುಡಿದು ಬರುತ್ತೇನೆ, ಸ್ವಲ್ಪ ಹೊತ್ತು ಈ ಬ್ಯಾಗ್ ಹಿಡಿದುಕೊಳ್ಳಿ ಎಂದು ಕೇಳಿದ್ದಾಳೆ.

ಚರಣ್ ಬೇರೇನೂ ಯೋಚಿಸದೆ ಬ್ಯಾಗನ್ನು ತೆಗೆದುಕೊಳ್ಳುತ್ತಾರೆ. ನೀರು ಕುಡಿದ ಮಹಿಳೆ ಅಲ್ಲಿಂದ ಸಾರ್ವಜನಿಕ ಶೌಚಾಲಯಕ್ಕೆ ಹೋಗುತ್ತಾಳೆ. ಆಕೆ ವಾಪಸ್ಸು ಬರುತ್ತಾಳೆ ಎಂದು ಚರಣ್ ಮತ್ತು ಲಕ್ಷ್ಮಿ ಕಾಯುತ್ತಾ ನಿಂತರೆ ಅರ್ಧ ಗಂಟೆಯಾದರೂ ಬರಲಿಲ್ಲ. ಇಬ್ಬರೂ ಮಹಿಳೆಗಾಗಿ ಹುಡುಕಿದರೂ ಎಲ್ಲಿಯೂ ಸಿಗದಿದ್ದಾಗ ಸಂಶಯ ಬಂದು ಬ್ಯಾಗನ್ನು ತಪಾಸಣೆ ಮಾಡಿದರು. ಅದರಲ್ಲಿ ಕೆಲ ಬಟ್ಟೆಗಳು ಮತ್ತು ಅಮೂಲ್ಯ ವಸ್ತುಗಳಿದ್ದವು. ಇನ್ನೂ ಹುಡುಕಿ ನೋಡಿದಾಗ ನವಜಾತ ಗಂಡುಮಗುವನ್ನು ಬಟ್ಟೆಯಲ್ಲಿ ಸುತ್ತಿಡಲಾಗಿತ್ತು.

ಕೂಡಲೇ ಟೀ ಅಂಗಡಿ ಮಾಲೀಕರಿಗೆ ವಿಷಯ ತಿಳಿಸಿದರು. ಅಲ್ಲಿ ಯಾರಾದರೂ ಮಹಿಳೆಯನ್ನು ಕಂಡಿದ್ದಾರೆಯೇ ಎಂದು ವಿಚಾರಿಸಿದರು. ನಂತರ ಚರಣ್ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಮಗುವನ್ನು ಕರೆದುಕೊಂಡು ಹೋಗಿ ದೂರು ನೀಡಿದರು.

ಮಗುವನ್ನು ಕೂಡಲೇ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ಆರೋಗ್ಯ ಪರೀಕ್ಷಿಸಿ ನಂತರ ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಇದೀಗ ಅಧಿಕಾರಿಗಳು ಮಹಿಳೆಯ ಪತ್ತೆಗೆ ಬಲೆ ಬೀಸಿದ್ದಾರೆ. ನವಜಾತ ಶಿಶುವನ್ನು, ತಾಯಿ ಹಣಕಾಸು ಅಥವಾ ಇತರ ಸಮಸ್ಯೆಗೆ ಬಿಟ್ಟು ಹೋಗಿರಬಹುದು. ಸುತ್ತಮುತ್ತಲ ಆಸ್ಪತ್ರೆಗೆ ಹೋಗಿ ಇತ್ತೀಚೆಗೆ ಹುಟ್ಟಿದ ಶಿಶುಗಳ ಪಟ್ಟಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.