
ಬೆಂಗಳೂರು(ಆ.26) : ಪತ್ರಿಕೆಗಳಲ್ಲಿ ಪ್ರಚಾರ ತೆಗೆದುಕೊಂಡು ಕೆಪಿಸಿಸಿ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಕೇವಲ ಒಬ್ಬರಿಂದ ಪಕ್ಷ ಸಂಘಟನೆ ಮಾಡ್ತೀವಿ ಅನ್ನೋಕಾಗಲ್ಲ. ನಮ್ಮ ನಾಯಕರು ಎಲ್ಲರೂ ಕೂಡ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕೇವಲ ಒಬ್ಬಿಬ್ಬರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಕೇಂದ್ರ ನಾಯಕ ಗುಲಾಂ ನಬಿ ಆಜಾದ್ ಬರುವ ವಿಚಾರ ನನಗೆ ಗೊತ್ತಿಲ್ಲ. ಕೆಪಿಸಿಸಿ ಪುನಾರಚನೆ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಯಾರು ಹೇಳಿದ್ದೋ ಗೊತ್ತಿಲ್ಲ. ಇಂತಹ ಪ್ರಚಾರ ಯಾರು ಮಾಡುತ್ತಾರೋ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ಪ್ರಚಾರ ಪಡೆದು, ಹುದ್ದೆ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ತಪ್ಪುಗಳನ್ನ ಮುಚ್ಚಿ ಹಾಕಿಕೊಳ್ಳಲು ಇಂತಹ ವಿಚಾರಗಳನ್ನು ಹರಿ ಬಿಡಲಾಗುತ್ತಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಸಂದರ್ಶನದ ವಿಚಾರವಾಗಿ ಪ್ರತಿಕ್ರಿಯಿಸಿದ ಗುಂಡೂರಾವ್, ಆ ಬಗ್ಗೆ ನಾನೇನೂ ಹೇಳಲ್ಲ. ಹಿಂದಿನದನ್ನು ಬಿಟ್ಟು ಮುಂದಿನದ ಬಗ್ಗೆ ಯೋಚನೆ ಮಾಡೋಣ. ಕೈ ಶಾಸಕರು ನನಗೆ ಫೈಲ್ ಎಸೆದ್ರು ಅನ್ನೋ ಹೆಚ್ಡಿಕೆ ಹೇಳಿಕೆ ವಿಚಾರ ನನಗೆ ಗೊತ್ತಿಲ್ಲ. ಯಾರು ಯಾರಿಗೆ ಎಸೆದ್ರೋ ಗೊತ್ತಿಲ್ಲ. ಅದು ನಮಗೆ ಬೇಕಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ಬಗ್ಗೆ ಎಐಸಿಸಿ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ನಡೆದ ಅಕ್ರಮದ ತನಿಖೆ ವಿಚಾರ, ಹಗರಣ, ಅಕ್ರಮ ಹೆಸರಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನ ಸ್ಥಗಿತಗೊಳಿಸುವ ಹುನ್ನಾರ ಇದು. ಆದರೆ ದ್ವೇಷದ ರಾಜಕಾರಣ ಮಾಡಲ್ಲ ಅಂತಾ ಹೇಳುತ್ತಿದ್ದ ಬಿಜೆಪಿ ಸರ್ಕಾರ ಇದೀಗ ಕೆಟ್ಟ ವಿಚಾರಗಳನ್ನ ಇಟ್ಕೊಂಡು ಈ ಕೆಲಸ ಮಾಡುತ್ತಿದೆ. ಬೆಂಗಳೂರಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಇಂದಿರಾ ಕ್ಯಾಂಟೀನ್ ನಲ್ಲಿ ಇಂದಿರಾ ಹೆಸರಿದೆಯಲ್ಲ ಅದನ್ನ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಹುನ್ನಾರ ಮಾಡಿ ಸ್ಥಗಿತಗೊಳಿಸುವ ಸಂಚು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ದಿನೇಶ್ ಗುಂಡೂವಾವ್ ವಾಗ್ದಾಳಿ ನಡೆಸಿದರು.
Comments are closed.