ಕರ್ನಾಟಕ

ಒಂದು ಅಪಘಾತದಿಂದ ಪೊಲೀಸರಿಗೆ ಸಿಕ್ತು, ಉಗ್ರ ದಾಳಿಯ ಸುಳಿವು|

Pinterest LinkedIn Tumblr


ಚಿಕ್ಕಬಳ್ಳಾಪುರ[ಆ.17]: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ರದ್ದಾದ ಬೆನ್ನಲ್ಲೇ ಪಾಕಿಸ್ತಾನ ಭಾರತದ ವಿರುದ್ಧ ಕಿಡಿ ಕಾರಿದೆ. ಅಲ್ಲದೇ ಒಂದಾದ ಬಳಿಕ ಮತ್ತೊಂದರಂತೆ ಎಚ್ಚರಿಕೆ ನಿಡುತ್ತಿದ್ದು, ಉಗ್ರ ದಾಳಿ ನಡೆದರೆ ನಮ್ಮನ್ನು ದೂಷಿಸಬೇಡಿ ಎಂದು ವಾರ್ನಿಂಗ್ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆ ಉಗ್ರರ ದಾಳಿ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆ ತೀವ್ರ ಎಚ್ಚರಿಕೆ ವಹಿಸುವಂತೆ ಪ್ರಕಟನೆ ಹೊರಡಿಸಿದೆ. ಹೀಗಾಗಿ ರಾಜ್ಯದ ಹಲವೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಮೆಟ್ರೋ ರೈಲು, ವಿಮಾನ, ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಸೇರಿದಂತೆ ಹಲವೆಡೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಸುವರ್ಣ ನ್ಯೂಸ್ ಗೆ ಬೆಂಗಳೂರಿಗೆ ಉಗ್ರರು ನುಸುಳಿರೋದಕ್ಕೆ ಬಲವಾದ ಸಾಕ್ಷಿ ಲಭ್ಯವಾಗಿದೆ.

ಕೇಂದ್ರ ಗುಪ್ತಚರ ಇಲಾಖೆ ಕೊಟ್ಟ ಮುನ್ನಚ್ಚೆರಿಕೆ ನಿಜವಾಗಿದ್ದು, ಕಾಶ್ಮೀರಿ ಕ್ರಮಕ್ಕೆ ಕರ್ನಾಟಕದಲ್ಲಿ ಪ್ರತೀಕಾರ ಪಡೆಯಲು ಉಗ್ರರು ಯತ್ನಿಸಿದ್ದರು. ರಾಜ್ಯ ಪೊಲೀಸರಿಗೆ ಉಗ್ರರ ಸುಳಿವು ನೀಡಿದ್ದು, ಆಗಸ್ಟ್ 11ರ ತಡರಾತ್ರಿ ಚಿಂತಾಮಣಿಯ ಕೈವಾರ ಬಳಿ ನಡೆದ ಅಪಘಾತ. ಆ ಒಂದು ಅಪಘಾತ ನಡೆಯದಿದ್ದರೆ ಇಡೀ ದೇಶವೇ ಇಂದು ಬೆಚ್ಚಿ ಬೀಳುತ್ತಿತ್ತು.

ಹೌದು ಆಗಸ್ಟ್ 11ರ ತಡರಾತ್ರಿ ಚಿಂತಾಮಣಿಯ ಕೈವಾರ ಬಳಿ ಅಪಘಾತವೊಂದು ನಡೆದಿತ್ತು. ಈ ವೇಳೆ ಧಾವಿಸಿದ್ದ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದರು. ಆಗಸ್ಟ್ 12ರ ಬೆಳಗ್ಗೆ ಕಾರಿನಲ್ಲಿದ್ದವರು ಕಾರು ಎಳೆದೊಯ್ಯಲು ಕ್ರೇನ್ ತರುವುದಾಗಿ ಬೆಂಗಳೂರಿಗೆ ಬಂದಿದ್ದರು. ಅಪಘಾತವಾಗಿದ್ದು ಮೈಸೂರು ನೋಂದಣಿಯ ಸ್ಕೋಡಾ ಕಾರು ಆಗಿದ್ದರೂ ಕಾರಿನಲ್ಲಿದ್ದವರಿಗೆ ಮಾತ್ರ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಉರ್ದುವಿನಲ್ಲಿ ಮಾತನಾಡಿದ್ದ ಶಂಕಿತರು ಅಪಘಾತ ನಡೆದು ಮೂರು ದಿನವಾದ್ರೂ ಮರಳಿ ಬಂದಿರಲಿಲ್ಲ.

ಫೋನ್ ನಂಬರ್ ಕೊಟ್ಟು ಹೋಗಿದ್ದ ಶಂಕಿತರು

ಶಂಕಿತರು ಸ್ಥಳೀಯರೊಬ್ಬರಿಗೆ ಫೋನ್ ನಂಬರ್ ಕೊಟ್ಟು ಹೋಗಿದ್ದರೂ, ಫೋನ್ ಮಾಡಿದಾಗ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಇದು ಶಂಕಿತರ ವರ್ತನೆ ಸ್ಥಳೀಯರಲ್ಲಿ ಅನುಮಾನ ಮೂಡಿಸಿತ್ತು. ಹೀಗಾಗಿ ತಡ ಮಾಡದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದರ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆ ದಾಳಿಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಹೀಗಿರುವಾಗ ರಾಜ್ಯ ಪೊಲೀಸರು ಪ್ರತಿಯೊಬ್ಬರ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿದ್ದು, ಈ ಅಪಘಾತ ಪ್ರಕರಣವನ್ನು ಗಮಭೀರವಾಗಿ ಪರಿಗಣಿಸಿದ್ದಾರೆ. ನಿನ್ನೆ, ಶುಕ್ರವಾರ ಕೇಂದ್ರ ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಶಂಕಿತರ ರೇಖಾ ಚಿತ್ರಗಳೊಂದಿಗೆ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳ ಕೈಯ್ಯಲ್ಲಿದ್ದ ರೇಖಾ ಚಿತ್ರ ಹಾಗೂ ಅಪಘಾತ ಮಾಡಿದವರ ನಡುವೆ ಹೋಲಿಕೆ ಇದೆ ಎಂದು ಸ್ಥಳೀಯರು ಪತ್ತೆ ಹಚ್ಚಿದ್ದರು. ಶಂಕಿತರ ಹೋಲಿಕೆ ಸ್ಪಷ್ಟವಾಗುತ್ತಿದ್ದಂತೆ ಚಿಂತಾಮಣಿಗೆ ಉಗ್ರ ನಿಗ್ರಹ ಪಡೆ ದೌಡಾಯಿಸಿದ್ದು, ಉಗ್ರ ನಿಗ್ರಹ ಪಡೆಯಿಂದ ಬೆರಳಚ್ಚು ಗುರುತು, ಸಿಸಿಟಿವಿಗಳ ಪರಿಶೀಲನೆ ಆರಂಭವಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಹಾಗೂ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸ್ವಾತಂತ್ರ್ಯ ದಿನಾಚರಣೆಯಂದು ವಿಧ್ವಂಸಕ ಕೃತ್ಯಕ್ಕೆ ಉಗ್ರರು ಸಂಚು ರೂಪಿಸಿದ್ದರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಸದ್ಯ ಉಗ್ರ ನಿಗ್ರಹ ಪಡೆ ಸ್ಥಳೀಯರಿಗೆ ನೀಡಿದ್ದ ಫೋನ್ ನಂಬರ್ ನೆಟ್ವರ್ಕ್ ಬೆನ್ನತ್ತಿದೆ. ಅಲ್ಲದೇ ಕಾರಿನ ಮಾಲೀಕರ ಹುಡುಕಾಟಕ್ಕೆ ಬಲೆ ಬೀಸಲಾಗಿದ್ದು, ದೇಶದ ಭದ್ರತಾ ಏಜೆನ್ಸಿಗಳಿಂದ ಕರ್ನಾಟಕ ಸೇಫ್ ಮಾಡಲು ಕಾರ್ಯಾಚರಣೆ ಭರದಿಂದ ಮುಂದುವರೆದಿದೆ.

Comments are closed.