ಕರ್ನಾಟಕ

ಯಡಿಯೂರಪ್ಪನವರ ಐವರು ಅಪ್ತರಿಗೆ ಸಚಿವ ಸ್ಥಾನ ಪಕ್ಕಾ!

Pinterest LinkedIn Tumblr


ಬೆಂಗಳೂರು [ಆ.16] : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ತೆರೆಮರೆಯಲ್ಲಿ ಬಹುವಾಗಿ ಶ್ರಮಿಸಿದ ಪಕ್ಷದ ಹಲವು ಶಾಸಕರು ಹಾಗೂ ಮುಖಂಡರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಶಾಸಕರಾದ ಅರವಿಂದ್‌ ಲಿಂಬಾವಳಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಆರ್‌.ವಿಶ್ವನಾಥ್‌, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಹಾಗೂ ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ಅವರು ಸರ್ಕಾರ ರಚಿಸುವುದಕ್ಕೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಹಲವು ತಿಂಗಳುಗಳಿಂದ ತಂತ್ರಗಾರಿಕೆ ರೂಪಿಸಿ ಸಾಕಷ್ಟುಶ್ರಮ ವಹಿಸಿದ್ದರು. ಇವರನ್ನು ಹೊರತುಪಡಿಸಿ ಇತರ ಕೆಲವು ಶಾಸಕರು ಹಾಗೂ ಮುಖಂಡರಿದ್ದರೂ ಐವರ ಪಾತ್ರ ಮುಖ್ಯವಾದದ್ದು.

ಈ ಪೈಕಿ ಯಡಿಯೂರಪ್ಪ ಅವರ ಆಪ್ತ ಸಹಾಯಕವಾಗಿರುವ ಸಂತೋಷ್‌ ಅವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿಯೇ ಮುಂದುವರೆಯಲಿದ್ದಾರೆ. ಆದರೆ, ಇನ್ನುಳಿದ ನಾಲ್ವರ ಪೈಕಿ ಎಲ್ಲರೂ ಸಚಿವ ಸ್ಥಾನದ ಬಗ್ಗೆ ಆಕಾಂಕ್ಷೆ ಹೊಂದಿದ್ದಾರೆ. ಯಡಿಯೂರಪ್ಪ ಅವರಿಗೂ ಲಿಂಬಾವಳಿ, ಅಶ್ವತ್ಥನಾರಾಯಣ, ವಿಶ್ವನಾಥ್‌ ಹಾಗೂ ಯೋಗೇಶ್ವರ್‌ ಅವರೆಲ್ಲರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಒಲವಿದೆ. ಆದರೆ, ಪಕ್ಷದ ಹೈಕಮಾಂಡ್‌ ಎಷ್ಟುಮಂದಿಗೆ ಹಸಿರು ನಿಶಾನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.

ಸದ್ಯಕ್ಕೆ ಲಭಿಸಿರುವ ಮಾಹಿತಿ ಅನುಸಾರ ಅರವಿಂದ್‌ ಲಿಂಬಾವಳಿ ಮತ್ತು ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎಂಬ ಮಾತು ಪಕ್ಷದಿಂದ ಕೇಳಿಬಂದಿದೆ. ಲಿಂಬಾವಳಿ ಅವರಿಗೆ ಹಿರಿತನ ಮತ್ತು ಪಕ್ಷ ಸಂಘಟನೆಯ ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷದ ಮುಂದಿನ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲೂ ಅವರ ಹೆಸರು ಮುಂಚೂಣಿಯಲ್ಲಿರುವುದರಿಂದ ಎರಡರಲ್ಲಿ ಒಂದು ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.

ಇನ್ನು ಡಾ.ಅಶ್ವತ್ಥ ನಾರಾಯಣ ಮತ್ತು ಎಸ್‌.ಆರ್‌.ವಿಶ್ವನಾಥ್‌ ಇಬ್ಬರೂ ಮೂರನೇ ಬಾರಿ ಶಾಸಕರಾಗಿದ್ದಾರೆ. ಆದರೆ, ಸರ್ಕಾರ ರಚನೆಯಲ್ಲಿ ವಿಶ್ವನಾಥ್‌ ಅವರಿಗೆ ಹೋಲಿಸಿದರೆ ಅಶ್ವತ್ಥನಾರಾಯಣ ಅವರ ಪಾತ್ರ ದೊಡ್ಡದು. ಹೆಚ್ಚೂ ಕಡಮೆ ತಿಂಗಳುಗಟ್ಟಲೇ ಇದಕ್ಕಾಗಿಯೇ ಸಮಯವನ್ನು ಮೀಸಲಿಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನರ್ಹ ಶಾಸಕರಿಗೂ ಭವಿಷ್ಯದಲ್ಲಿ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಬಿಜೆಪಿಗರಿಗೆ ಸಚಿವ ಸ್ಥಾನಗಳ ಕೊರತೆ ಎದುರಾಗಲಿದೆ. ಹೀಗಾಗಿ, ಅಶ್ವತ್ಥನಾರಾಯಣ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೊ ಅಥವಾ ಬೇರೊಂದು ಹುದ್ದೆಯನ್ನು ನೀಡಿ ಸಮಾಧಾನ ಮಾಡಲಾಗುತ್ತದೆಯೊ ಎಂಬುದು ಸ್ಪಷ್ಟವಾಗಿಲ್ಲ.

Comments are closed.