ಕರ್ನಾಟಕ

ಮಾಜಿ ಮುಖ್ಯಮಂತ್ರಿ ಪಟ್ಟ ಹೋದರ ಪರವಾಗಿಲ್ಲ ಮಂತ್ರಿ ಮಾಡಿ ಎಂದ ಜಗದೀಶ್ ಶೆಟ್ಟರ್

Pinterest LinkedIn Tumblr


ಬೆಂಗಳೂರು: ಬಿ.ಎಸ್​.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರಚನೆಯಾಗಿದೆ. ನೂತನ ಸರ್ಕಾರದಲ್ಲಿ ಮಂತ್ರಿ ಪದವಿಗಾಗಿ ಹಲವು ಶಾಸಕರು ತುದಿಗಾಲಲ್ಲಿ ನಿಂತಿದ್ದರೆ, ಇನ್ನು ಹಲವರು ಮಂತ್ರಿ ಆಗಲೇಬೇಕು ಎಂದು ಹಠ ಹಿಡಿದಿದ್ದಾರೆ. ಆ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಕೂಡ ಒಬ್ಬರು.

ಮಂತ್ರಿ ಆಗುವ ಹಠಕ್ಕೆ ಬಿದ್ದಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸಚಿವ ಸ್ಥಾನಕ್ಕಾಗಿ ಬಿಎಸ್​ವೈಗೆ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಮಂತ್ರಿ ಆದರೆ, ಹಿಂಬಡ್ತಿ ಆದಂತೆ. ಆದರೂ ಶೆಟ್ಟರ್​ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮಂತ್ರಿ ಸ್ಥಾನ ಬೇಕೇಬೇಕು ಎಂದು ಹಠ ಹಿಡಿದಿದ್ದಾರೆ.

ಜಗದೀಶ್​ ಶೆಟ್ಟರ್​ ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಇವರಿಗೆ ಈಗ ಮಂತ್ರಿ ಸ್ಥಾನ ನೀಡುವುದು ಸೂಕ್ತವಲ್ಲ. ಹೀಗಾಗಿ ಅವರನ್ನು ವಿಧಾನಸಭೆ ಸ್ಪೀಕರ್ ಮಾಡುವುದು ಉತ್ತಮ ಎಂಬ ಲೆಕ್ಕಾಚಾರವನ್ನು ಬಿಜೆಪಿ ಮುಖಂಡರು ನಡೆಸಿದ್ದರು. ಆದರೆ, ಸ್ಪೀಕರ್​ ಆಗಲು ಶೆಟ್ಟರ್​ ಸುತಾರಾಂ ಒಪ್ಪಲಿಲ್ಲ. ಆನಂತರ ಆ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೂರಿಸಲಾಯಿತು. ಆದರೆ, ತನಗೆ ಮಂತ್ರಿ ಸ್ಥಾನ ಬೇಕು ಎಂದು ಜಗದೀಶ್ ಶೆಟ್ಟರ್​ ನೆನ್ನೆ ರಾತ್ರಿ ಡಾಲರ್ಸ್​ ಕಾಲೋನಿಯಲ್ಲಿರುವ ಬಿಎಸ್​ವೈ ನಿವಾಸದಲ್ಲಿ ಹಠ ಹಿಡಿದು ಕುಳಿತಿದ್ದರು.

ಇದರ ಜೊತೆಗೆ ತಮಗೆ ಇಂತಹದ್ದೇ ಖಾತೆಯನ್ನು ಕೊಡಿ ಎಂದು ಶೆಟ್ಟರ್​ ಡಿಮ್ಯಾಂಡ್​ ಕೂಡ ಮಾಡಿದ್ದಾರೆ. ತಾನು ಸಿಎಂ ಆಗಿದ್ದವರು ಹೀಗಾಗಿ ಡಿಸಿಎಂ ಮಾಡಿ, ಇಲ್ಲವಾದಲ್ಲಿ ಗೃಹ, ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರಂತೆ.

ಶೆಟ್ಟರ್ ಬೇಡಿಕೆ ಕೇಳಿ ಕಂಗಾಲಾಗಿದ್ದಾರೆ ಬಿಎಸ್​ವೈ, ಡಿಸಿಎಂ ಸ್ಥಾನ ನೀಡಲಾಗದಿದ್ದರೂ ಮಂತ್ರಿ ಮಾಡುವ ತೀರ್ಮಾನಕ್ಕೆ ಬಂದಿದ್ದಾರಂತೆ. ಹೀಗಾಗಿ ಅಮಿತ್ ಶಾಗೆ ಕಳಿಸುವ ಸಚಿವರ ಹೆಸರಿನ ಪಟ್ಟಿಯಲ್ಲಿ ಜಗದೀಶ್​ ಶೆಟ್ಟರ್ ಹೆಸರು ಸೇರಿಸಿ ಕಳಿಯಿಸುವ ಭರವಸೆ ನೀಡಿದ್ದಾರಂತೆ. ಮಾಜಿ ಸಿಎಂ ಎಂಬ ಅತಿದೊಡ್ಡ ಗೌರವ ಹೋದರು ಪರವಾಗಿಲ್ಲ, ಮಂತ್ರಿ ಮಾಡಿ ಎಂದು ಜಗದೀಶ್​ ಶೆಟ್ಟರ್​ ಹಠ ಹಿಡಿಯಲು ಅವರ ಹೋಮ್​ ಮಿನಿಸ್ಟರ್​ (ಹೆಂಡತಿ) ಕಾರಣವಂತೆ ಎಂಬ ಚರ್ಚೆ ಬಿಜೆಪಿಯಲ್ಲಿ ಜೋರಾಗಿ ನಡೆಯುತ್ತಿದೆ.

Comments are closed.