ಕರ್ನಾಟಕ

ತಡರಾತ್ರಿವರೆಗೂ ನಡೆಯದ ವಿಶ್ವಾಸಮತ ಯಾಚನೆ; ಮಂಗಳವಾರ ಸಂಜೆ 6ಕ್ಕೆ ಡೆಡ್ ಲೈನ್

Pinterest LinkedIn Tumblr

ಬೆಂಗಳೂರು: ದೋಸ್ತಿ ಸರಕಾರದ ಪ್ಲಾನ್‌ ನಂತೆ ವಿಶ್ವಾಸಮತಯಾಚನೆ ಪ್ರಕ್ರಿಯೆಯನ್ನು ಮುಂದೂಡುವಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಯಶಸ್ವಿಯಾದರು.

ಸೋಮವಾರ ನಿಗದಿಯಾಗಿದ್ದ ವಿಶ್ವಾಸಮತಯಾಚನೆ ಪ್ರಕ್ರಿಯೆಯನ್ನು ಮಂಗಳವಾರ ಸಂಜೆ 6 ಗಂಟೆಯೊಳಗೆ ಮುಗಿಸಲು ಸ್ಪೀಕರ್‌ ಕೆಆರ್‌ ರಮೇಶ್‌ ಕುಮಾರ್ ಡೆಡ್‌ ಲೈನ್ ನಿಗದಿ ಮಾಡಿದರು.

ನಾಳೆ ಸಂಜೆ ಆರು ಗಂಟೆಯ ಒಳಗೆ ಈ ನಿರ್ಣಯಕ್ಕೆ ಅಂತ್ಯ ಕಾಣಿಸಬೇಕು ಎಂದು ನಿರ್ದೇಶಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌, ಕಲಾಪವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು.

ಕಲಾಪ ಮುಂದೂಡುವಂತೆ ಪಟ್ಟು ಹಿಡಿದ ದೋಸ್ತಿ ನಾಯಕರಲ್ಲಿ ರಮೇಶ್‌ ಕುಮಾರ್‌ ಖಡಕ್‌ ಆಗಿ ಯಾವಾಗ ಕಲಾಪ ಮುಗಿಸುತ್ತೀರಿ ಎಂದು ಸ್ಪಷ್ಟಪಡಿಸಲು ತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಮೊದಲಿಗೆ ರಾತ್ರಿ 8 ಗಂಟೆ ವರೆಗೆ ಸಮಯವಕಾಶ ಕೇಳಿದರು. ಇದಕ್ಕೆ ರಮೇಶ್‌ ಕುಮಾರ್‌ ಮನ್ನಣೆ ನೀಡದೇ, ಸೋಮವಾರವೇ ಮುಗಿಸುತ್ತೀರಿ ಎಂದು, ನೀವು ನಿಮ್ಮ ಮಾತು ತಪ್ಪಿದ್ದೀರಿ. ನಿಮ್ಮ ಮೇಲಿನ ವಿಶ್ವಾಸ ಮಾಯವಾಗುತ್ತಿದೆ. ನಾಳೆಯೂ ರಾತ್ರಿ 8 ಗಂಟೆವರೆಗೆ ಕೂರಲು ಸಾಧ್ಯವಿಲ್ಲ. ಸಂಜೆ 4 ಗಂಟೆಯೇ ಅಂತಿಮ ಎಂದರು.

ಇದಕ್ಕೆ ಮತ್ತೆ ಉತ್ತರಿಸಿದ ಸಿದ್ದರಾಮಯ್ಯ, ಸಂಜೆ 4 ಗಂಟೆಗೆ ಚರ್ಚೆ ಮುಗಿಸುತ್ತೇವೆ. ಒಂದು ಗಂಟೆ ಸಿಎಂ ಕುಮಾರಸ್ವಾಮಿ ಉತ್ತರ ನೀಡುತ್ತಾರೆ. 6 ಗಂಟೆಯ ವರೆಗೆ ಸಮಯ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪೀಕರ್‌ ಒಪ್ಪಿಗೆ ಸೂಚಿಸಿದ ರಮೇಶ್‌ ಕುಮಾರ್‌, ಬಿಜೆಪಿಯವರ ವಿರೋಧದ ನಡುವೆಯೇ ಮಂಗಳವಾರ ಆರು ಗಂಟೆಯ ಬಳಿಕ ಒಂದು ಕ್ಷಣವೂ ಈ ಸದನ ನಡೆಯೋದಿಲ್ಲ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಸೇರೋಣ ಎಂದು ಕಲಾಪ ಮುಂದೂಡಿದರು.

ಜು.22ರ ಕಲಾಪದಲ್ಲಿ, ದಿನವಿಡೀ ಹೇಳಿದ್ದನ್ನೇ ಹೇಳಿ ಸದನದ ಸಮಯ ತಳ್ಳಿದ ದೋಸ್ತಿ ಸರ್ಕಾರದ ಶಾಸಕರು ವಿಶ್ವಾಸಮತದ ಮೇಲೆ ಮತ್ತಷ್ಟು ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು.

ರಾತ್ರಿ 9 ಕ್ಕೆ ಪ್ರಾರಂಭವಾದ ಕಲಾಪದಲ್ಲೂ ಆಡಳಿತ ಪಕ್ಷದ ಶಾಸಕರು ಗದ್ದಲ ಉಂಟುಮಾಡಿದರು. ಅಷ್ಟೇ ಅಲ್ಲದೇ ವಿಪಕ್ಷ ನಾಯಕ ಯಡಿಯೂರಪ್ಪ ಅವರ ಭಾಷಣಕ್ಕೂ ಅಡ್ಡಿಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ನಡಾವಳಿಕೆಗೆ ಕೆಂಡಾಮಂಡಲರಾದ ಸ್ಪೀಕರ್ ರಮೇಶ್ ಕುಮಾರ್ ಕರ್ನಾಟಕದ ಜನತೆ ನಿಮ್ಮನ್ನು ಗಮನಿಸುತ್ತಿದ್ದಾರೆ. ಬಂದು ಕುಳಿತುಕೊಳ್ಳಿ ಎಂದು ಹೇಳಿದರೂ ಸ್ಪೀಕರ್ ಮಾತಿಗೆ ಯಾರೂ ಜಗ್ಗಲಿಲ್ಲ. ಕೊನೆಗೆ ಸಿದ್ದರಾಮಯ್ಯ ಸೂಚಿಸುತ್ತಿದ್ದಂತೆಯೇ ಕುಳಿತ ಶಾಸಕರು ಕೆಲ ಕಾಲ ಸದನ ನಡೆಯುವುದಕ್ಕೆ ಅವಕಾಶ ನೀಡಿದರು. ಬಿಜೆಪಿಯ ಮಾಧುಸ್ವಾಮಿ, ಯಡಿಯೂರಪ್ಪ ಮಾತನಾಡುತ್ತಿದ್ದಂತೆಯೇ ಮತ್ತೆ ಗದ್ದಲ ಎಬ್ಬಿಸಿದರು.

ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ ತಾವು ವಿಶ್ವಾಸಮತಯಾಚನೆಗೆ ಸಿದ್ಧವಿರುವುದಾಗಿಯೂ ಅದಕ್ಕೆ ಮತ್ತಷ್ಟು ಸಮಯ ನೀಡಬೇಕೆಂದು ಸ್ಪೀಕರ್ ನ್ನು ಕೋರಿದರು. ಆದರೆ ವಿಪಕ್ಷ ನಾಯಕ ಯಡಿಯೂರಪ್ಪ ಮಾತನಾಡಿ ರಾತ್ರಿ 1 ಗಂಟೆಯಾದರೂ ಪರವಾಗಿಲ್ಲ ಇಂದೇ ವಿಶ್ವಾಸಮತಯಾಚನೆ ಪ್ರಕ್ರಿಯೆ ಪೂರ್ಣಾಗೊಳ್ಳಲಿ ಎಂದು ಆಗ್ರಹಿಸಿದರು.

Comments are closed.