ಕರ್ನಾಟಕ

ಮಂಗಳವಾರ ಬೆಳಗ್ಗೆ 11ರೊಳಗೆ ಸ್ಪೀಕರ್​ ಮುಂದೆ ಹಾಜರಾಗಿ, ಇಲ್ಲವೇ ಅನರ್ಹರಾಗುತ್ತೀರಿ: ಅತೃಪ್ತ ಶಾಸಕರಿಗೆ ಖಡಕ್ ಸಂದೇಶ ರವಾನಿಸಿದ ಡಿಕೆಶಿ

Pinterest LinkedIn Tumblr

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಅತೃಪ್ತ ಶಾಸಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರದ ಕೊನೆ ಗಳಿಗೆಯಲ್ಲಿ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿರುವ ಅತೃಪ್ತ ಶಾಸಕರು ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ ಕುಮಾರ್​ ಎದುರು ಹಾಜರಾಗಬೇಕು. ಹಾಗೂ ರಾಜೀನಾಮೆ ಕುರಿತು ತಮ್ಮ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ, ಮಂಗಳವಾರ ಸಂಜೆ ವೇಳೆಗೆ ಕೆ.ಆರ್​. ರಮೇಶ್​ಕುಮಾರ್​ ಇರಲಿ ಅಥವಾ ಇಲ್ಲದಿರಲಿ ನಿಮ್ಮನ್ನು ಅನರ್ಹಗೊಳಿಸಲಾಗುತ್ತದೆ ಎಂದು ಅತೃಪ್ತ ಶಾಸಕರಿಗೆ ಸಚಿವ ಡಿ.ಕೆ. ಶಿವಕುಮಾರ್​ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾ ಲೋಪದ ಕುರಿತು ವಿಧಾನಸಭಾಧ್ಯಕ್ಷರು ರೂಲಿಂಗ್​ ಕಾಯ್ದಿರಿಸಿದ್ದರು. ಅದನ್ನು ಸೋಮವಾರ ನೀಡಿದ್ದು, ರಾಜೀನಾಮೆ ಅಂಗೀಕಾರವಾಗದ ಕಾರಣ ಅವರೆಲ್ಲರಿಗೂ ವಿಪ್​ ಜಾರಿ ಮಾಡಬಹುದಾಗಿದೆ. ಹಾಗಾಗಿ ವಿಪ್​ ಜಾರಿ ಮಾಡುವಂತೆ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕರಿಗೆ ಸ್ಪೀಕರ್​ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಅವರಿಗೆ ಅನುಕೂಲ ಮಾಡಿಕೊಡಲು ನೀವೆಲ್ಲರೂ ರಾಜೀನಾಮೆ ಪ್ರಹಸನ ಮಾಡುತ್ತಿದ್ದೀರಿ. ಅವರು ಕೂಡ ಅನರ್ಹರಾದರೆ ಏನೂ ಆಗಲ್ಲ ಎಂದು ನಿಮಗೆ ಹೇಳಿಕೊಡುತ್ತಿರಬಹುದು. ಆದರೆ, ಸಂವಿಧಾನದ ಪ್ರಕಾರ ನೀವು ಅನರ್ಹಗೊಂಡಲ್ಲಿ, ನೀವು ಆಯ್ಕೆಯಾಗಿರುವ ವಿಧಾನಸಭೆಯ ಉಳಿದ ಅವಧಿವರೆಗೆ ಮತ್ತೆ ವಿಧಾನಸಭೆ ಅಥವಾ ವಿಧಾನಪರಿಷತ್​ ಸದಸ್ಯರಾಗಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

Comments are closed.