ಕರ್ನಾಟಕ

ಸಂಕಷ್ಟದಲ್ಲಿ ಕುರುಕ್ಷೇತ್ರ ದರ್ಶನ.. ಆತಂಕದಲ್ಲಿ ದರ್ಶನ್ ಫ್ಯಾನ್ಸ್..!

Pinterest LinkedIn Tumblr


ಡಿ ಬಾಸ್ ದರ್ಶನ್ ಅಭಿನಯದ 50ನೇ ಸಿನಿಮಾದ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿದೆ. ಆದರೆ ಫಿಕ್ಸ್ ಮಾಡಿರೋ ಡೇಟ್​ಗೆ ಕುರುಕ್ಷೇತ್ರ ರಿಲೀಸ್ ಆಗುತ್ತೋ ಇಲ್ವೋ ಅನ್ನೋದೇ ದೊಡ್ಡ ಕನ್ಫ್ಯೂಷನ್. ಅದ್ರಲ್ಲೂ ದರ್ಶನ್ ದುರ್ಯೋಧನನ ಖದರ್ ನೋಡೋಕ್ಕೆ ಕಾಯ್ತಿರೋ ಫ್ಯಾನ್ಸ್​ಗೆ ನಿರಾಸೆಯಾದರು ಅಚ್ಚರಿಯಿಲ್ಲ.

ಕುರುಕ್ಷೇತ್ರ. ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ನಂತರ ದೇಶಾದ್ಯಂತ ಸದ್ದು ಮಾಡೋಕ್ಕೆ ಸಜ್ಜಾಗ್ತಿರೋ ಮತ್ತೊಂದು ಮೆಗಾ ಪ್ಯಾನ್ ಇಂಡಿಯನ್ ಸಿನಿಮಾ. ದಾಸ ದರ್ಶನ್ ಅಭಿನಯದ 50ನೇ ಸಿನಿಮಾ, ಇಡೀ ಚಿತ್ರರಂಗ ಒಂದು ಫ್ರೇಮ್​ನಲ್ಲಿ ಕಾಣಸಿಗಲಿರೋ ಮಹಾದೃಶ್ಯಕಾವ್ಯ. ಈ ಚಿತ್ರದ ರಿಲೀಸ್ ಡೇಟ್ ಆಗಸ್ಟ್ 2ಕ್ಕೆ ಅಂತ ಫಿಕ್ಸ್ ಆಗಿ ಬಹಳ ದಿನಗಳೇ ಆಯ್ತು. ಆದ್ರೀಗ ಆ ಟೈಮ್​ಗೆ ಸಿನಿಮಾ ರಿಲೀಸ್ ಆಗುತ್ತೋ ಇಲ್ವೋ ಅನ್ನೋದೇ ಯಕ್ಷ ಪ್ರಶ್ನೆ.

ರಾಬರ್ಟ್​ನಲ್ಲಿ ಬಾಸ್.. ಮುಂಬೈನಲ್ಲಿ ಮುನಿ.. ಫುಲ್ ಬ್ಯುಸಿ

ಅತೃಪ್ತ ಶಾಸಕರ ಪಟ್ಟಿಯಲ್ಲಿ ರಾರಾಜಿಸ್ತಿರೋ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ, ಸಮ್ಮಿಶ್ರ ಸರ್ಕಾರದ ಮೇಲೆ ಮುನಿಸಿಕೊಂಡು ಮುಂಬೈ ಸೇರಿದ್ದಾರೆ. ಮೀಡಿಯಾ ಸೇರಿದಂತೆ ಪಕ್ಷದ ಹಿರಿಯ ನಾಯಕರ ಕೈಗೂ ಸಿಗದ ಹಾಗೆ ಕಾಣೆಯಾಗಿದ್ದಾರೆ. ಹೀಗೆ ಅವರ ರಾಜಕೀಯ ಜಂಜಾಟದಲ್ಲಿ ಬ್ಯುಸಿಯಾದರೆ, ಇಲ್ಲಿ ಕುರುಕ್ಷೇತ್ರ ಪ್ರಮೋಷನ್ಸ್ ಗತಿಯೇನು..?

ಅಷ್ಟೇ ಅಲ್ಲ, ಚಿತ್ರದ ಕಥಾನಾಯಕ ದಿ ಬಾಸ್ ದಚ್ಚು ಕೂಡ ರಾಬರ್ಟ್​ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ನಿರ್ಮಾಪಕರೇ ಚಿತ್ರದ ಪ್ರಮೋಷನ್ಸ್ ಬಗ್ಗೆ ತಲೆಕೆಡಿಸಿಕೊಳ್ಳದಿರೋದು ಕಲಾವಿದರಿಗೂ ಗೊಂದಲವುಂಟು ಮಾಡಿದೆ. ಅಷ್ಟೇ ಅಲ್ಲ, ದರ್ಶನ್ ಭೀಮನ ಜೊತೆಗಿನ ಗದಾಪ್ರಹಾರ ನೋಡೋಕ್ಕೆ ಕೌತುಕದಿಂದ ಕಾಯ್ತಿದ್ದ ಡಿ ಬಾಸ್ ಫ್ಯಾನ್ಸ್ ಆತಂಕದಲ್ಲಿದ್ದಾರೆ.

ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಟೂಡಿ ಜೊತೆ ತ್ರೀಡಿಯಲ್ಲೂ ಏಕಕಾಲದಲ್ಲಿ ವರ್ಲ್ಡ್​ ವೈಡ್ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದಕ್ಕೆ ಅಂತಲೇ ಬರೋಬ್ಬರಿ ಒಂದು ತಿಂಗಳ ಕಾಲ ಪ್ರಮೋಷನ್ಸ್ ಮಾಡೋದಾಗಿ ಯೋಜನೆ ರೂಪಿಸಿತ್ತು. ಆದ್ರೀಗ ರಿಲೀಸ್ ಡೇಟ್​ಗೆ ದಿನಗಣನೆ ಶುರುವಾಗಿದೆ. ಇತ್ತ ಚಿತ್ರದ ಬಗ್ಗೆ ತಲೆಕೆಡಿಸಿಕೊಳ್ಳೋರೇ ಇಲ್ಲ.

ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ, ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಬೇಕು ಅಂತ ಪ್ಲಾನ್ ಮಾಡಿದ್ದ ಚಿತ್ರತಂಡ ಇದರಿಂದ ಸಂಕಷ್ಟದಲ್ಲಿ ಸಿಲುಕಿಕೊಳ್ಳೋ ಸಾಧ್ಯತೆಯಿದೆ. ಇನ್ನು ಆಗಸ್ಟ್ 2ಕ್ಕೆ ರಿಲೀಸ್ ಆಗದಿದ್ದಲ್ಲಿ, ಪೈಲ್ವಾನ್ ಹಾಗೂ ಸಾಹೋ ಸಿನಿಮಾಗಳ ಅಬ್ಬರದಲ್ಲಿ ಕುರುಕ್ಷೇತ್ರ ಕದನ ವರ್ಕೌಟ್ ಆಗೋದು ಕೂಡ ಡೌಟು ಅನ್ನೋದು ಒಂದಷ್ಟು ಮಂದಿಯ ಲೆಕ್ಕಾಚಾರ. ಅದೇನೇ ಇರಲಿ, ಚಿತ್ರತಂಡ ಆದಷ್ಟು ಬೇಗ ಈ ಗೊಂದಲಕ್ಕೆ ಎಳ್ಳುನೀರು ಬಿಟ್ಟರೆ ಒಳ್ಳೆಯದು. ಹಾಗೂ ಡಿ ಬಾಸ್ ಫ್ಯಾನ್ಸ್​ ಕೂಡ ದಿಲ್ ಖುಷ್ ಆಗ್ತಾರೆ.

Comments are closed.