
ಮುಂಬೈ: ನಾವು ಎಂಟಿಬಿ ನಾಗರಾಜ್ ಮತ್ತು ನಾರಾಯಣ ಗೌಡರ ಇಬ್ಬರ ಜನ್ಮ ದಿನ ಆಚರಿಸಿದ್ದೇವೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ರೆಬೆಲ್ ಶಾಸಕ ಎಸ್.ಟಿ ಸೋಮಶೇಖರ್ ಅವರು ಹೇಳಿದ್ದಾರೆ.
ಮುಂಬೈನಲ್ಲಿಂದು ಮಾತನಾಡಿರುವ ಅವರು, ನಾವು 13 ಜನ ಶಾಸಕರು ಒಟ್ಟಾಗಿ ಸೇರಿಕೊಂಡು ಜನ್ಮದಿನವನ್ನು ಆಚರಿಸಿದ್ದೇವೆ. ನಾವು ಒಗ್ಗಟ್ಟಾಗಿದ್ದೇವೆ ಜೊತೆಗೆ ಜೀವಂತವಾಗಿದ್ದೇವೆ ಅಷ್ಟೇ ಅಲ್ಲದೇ ನಾವು ಆರೋಗ್ಯವಾಗಿ, ಚೆನ್ನಾಗಿ ಇದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಾವ್ಯಾರೂ ಗನ್ ಪಾಯಿಂಟ್ ಅಲ್ಲಿ ಇಲ್ಲ, ನಾವೇಲ್ಲರೂ ಒಂದಾಗಿ ಜೊತೆಯಾಗಿ ಇದ್ದೇವೆ ಎಂದು ಕೈ ಅತೃಪ್ತ ಶಾಸಕ ಎಸ್.ಟಿ ಸೋಮಶೇಖರ್ ಅವರು ಹೇಳಿಕೊಂಡಿದ್ದಾರೆ.
ಹೆಚ್. ವಿಶ್ವನಾಥ್ ಕೆಂಡಾಮಂಡಲ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಹೆಸರಿನಲ್ಲಿ ರಾಕ್ಷಸ ರಾಜಕಾರಣ ಆರಂಭ ಆಯ್ತು, ಇದರಿಂದ ಜನರಿಗೆ ಉಪಯೋಗವಿಲ್ಲ, ಹೀಗಾಗಿ ನಾವೇಲ್ಲ ಕೆಲ ಶಾಸಕರು ಪದವಿ ತ್ಯಾಗ ಮಾಡಲು ನಿರ್ಧರಿಸಿದ್ದೇವೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ, ಶಾಸಕ ಹೆಚ್.ವಿಶ್ವನಾಥ್ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸಮ್ಮಿಶ್ರವೂ ಇಲ್ಲ, ರಾಜ್ಯ ಧರ್ಮವೂ ಇಲ್ಲದಂತಾಗಿದೆ. ರಾಜ್ಯದ ಒಳ್ಳೆಯದಕ್ಕಾಗಿ ಈ ಪದ ತ್ಯಾಗ ನಿರ್ಧಾರ ಮಾಡಿದ್ದೇವೆ. ದೋಸ್ತಿ ನಾಯಕರಿಗೆ ಬುದ್ಧಿ ಕಲಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವುದೇ ಅಧಿಕಾರ, ಆಮಿಷ್ಯಕ್ಕಾಗಿ ನಾವು ಇಲ್ಲಿ ಬಂದಿಲ್ಲ ಎಂದು ದೋಸ್ತಿ ಸರ್ಕಾರದ ವಿರುದ್ಧ ಹೆಚ್ ವಿಶ್ವನಾಥ್ ಅವರು ಕಿಡಿಕಾರಿದ್ದಾರೆ.
ಬಿ.ಸಿ ಪಾಟೀಲ್ ಸ್ವಾಭಿಮಾದ ಮಾತು
ನಾವೆಲ್ಲಾ ಸ್ವಾಭಿಮಾನಕ್ಕಾಗಿ ಬದುಕಿದಂತವರು, ಸ್ವಾಭಿಮಾನಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದಂತವರು. ಇಲ್ಲಿ ಬಂದಿರುವ 15 ಶಾಸಕರು ರಾಜೀನಾಮೆ ಕೊಟ್ಟಿದ್ದೇವೆ ಯಾರು ಆಸೆ ಆಮಿಷಗಳಿಗೆ ಬಲಿಯಾಗಿ ನಾವು ರಾಜೀನಾಮೆ ಕೊಟ್ಟಿಲ್ಲ, ಯಾವುದೇ ಒತ್ತಡದಲ್ಲಿ ಇಲ್ಲ, ನಾವು ಸ್ವ-ಇಚ್ಛೆಯಿಂದ ಬಂದಿದ್ದೇವೆ, ಸ್ವತಂತ್ರವಾಗಿದ್ದೇವೆ. ನಾಳೆ ನಡೆಯುವ ಸದನಕ್ಕೆ ನಾವು ಹಾಜರಾಗುವುದಿಲ್ಲ ಇದು ಸತ್ಯ ಎಂದು ಅತೃಪ್ತ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಅವರು ಹೇಳಿದ್ದಾರೆ.
ಬೈರತಿ ಬಸವರಾಜ ಗುಡುಗು
ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಉಳಿಬಾರದು, ಯಾರು ಕೂಡಾ ಸರ್ಕಾರ ಉಳಿಸುವ ಕೆಲಸ ಮಾಡಬಾರದು ಎಂದು ಹಿರಿಯ ನಾಯಕರು ಹೇಳಿದ್ದಾರೆ. ಇವತ್ತು ನಮ್ಮನ್ನ ಬೆತ್ತಲೇ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರೇ ಹೇಳಿದ್ದು ಎಂದು ಕೆ.ಆರ್ ಪುರಂ ಕಾಂಗ್ರೆಸ್ ರೆಬೆಲ್ ಶಾಸಕ ಬೈರತಿ ಬಸವರಾಜು ಅವರು ಹೇಳಿದರು.
ಸದ್ಯ ಈವಾಗ ನಮ್ಮನ್ನು ಬೆತ್ತಲೆ ಮಾಡಲು ಹೊರಟಿದ್ದಾರೆ. ನಾವೆಲ್ಲಾ ವಿಚಾರಗಳನ್ನು ಬೆಂಗಳೂರಿಗೆ ಮರಳಿದ ಬಳಿಕ ಪ್ರೇಸ್ಮೀಟ್ ಮಾಡಿ ಬಿಚ್ಚಿಡ್ತಿವಿ. ನಾವ್ಯಾರೂ ಅಧಿಕಾರ, ಹಣಕ್ಕಾಗಿ ಬಂದಿಲ್ಲ, ನಾನು 30 ವರ್ಷದ ರಾಜಕಾರಣ ಮಾಡಿರುವೆ. ನಾವು ಏನಾದರೂ ತಪ್ಪು ಮಾಡಿದ್ರೆ ರಾಜ್ಯದ ಜನತೆ ಕ್ಷಮಿಸಬೇಕು. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
Comments are closed.