
ಹುಬ್ಬಳ್ಳಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ವಿಶ್ವಾಸ ಮತ ಸಾಬೀತಿಗೆ ಐದು ದಿನ ತೆಗೆದುಕೊಂಡಿದ್ದು ದೊಡ್ಡ ದುರಂತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಮೈತ್ರಿ ನಾಯಕರು ಕುದುರೆ ವ್ಯಾಪಾರ ಮಾಡುವ ಮುನ್ಸೂಚನೆ ಕೊಡುತ್ತಿದ್ದಾರೆ. ಯಾವ ಶಾಸಕರೂ ಖರೀದಿಯಾಗಿಲ್ಲ ಎಂದರು.
ಸ್ಪೀಕರ್ ರಮೇಶ್ ಕುಮಾರ್ ವರ್ತನೆ ಆಘಾತಕಾರಿ. ತತ್ವ ಬದ್ಧರಾಗಿ ನಡೆದುಕೊಳ್ಳುತ್ತಾರೆಂದು ಭಾವಿಸಿದ್ದೆ, ಆದರೆ ರಮೇಶ್ ಕುಮಾರ್ ಕೆಟ್ಟ ರೀತಿಯಿಂದ ವರ್ತಿಸಿದ್ದು ದುರ್ದೈವ. ರಾಜ್ಯಪಾಲರು ಸಂವಿಧಾನದ ಆಶಯದಂತೆ ವರ್ತಿಸುತ್ತಿದ್ದಾರೆ. ಬಹುಮತ ಸಾಬೀತಿಗೆ ಎಲ್ಲ ದೃಷ್ಟಿಯಿಂದ ಅವಕಾಶ ಕೊಟ್ಟಿದ್ದಾರೆ. ಮೈತ್ರಿ ನಾಯಕರು ತಮಗೆ ಬಹುಮತ ಇಲ್ಲದೆ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದಾರೆ. ಕೇಂದ್ರ ಸರ್ಕಾರ ಈಗ ಯಾವುದೇ ರೀತಿಯಿಂದ ಮಧ್ಯ ಪ್ರವೇಶ ಮಾಡಲ್ಲ. ನಾವು ಎಲ್ಲವನ್ನೂ ಸೂಕ್ಷ್ಮ ರೀತಿಯಿಂದ ಗಮನಿಸುತ್ತಿದ್ದೇವೆ ಎಂದು ತಿಳಿಸಿದರು.
ಸ್ಪೀಕರ್ ಸೋಮವಾರ ಕೊನೆಯ ದಿನ ಎಂದಿದ್ದಾರೆ, ಅಲ್ಲಿಯವರೆಗೆ ಸಮಾಧಾನದಿಂದ ಕಾಯುವುದು ಸೂಕ್ತ. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡಿಲ್ಲ, ಶ್ರೀಮಂತ ಪಾಟೀಲ್ ಸೇರಿದಂತೆ ಅವರ ಶಾಸಕರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಶಾಸಕರನ್ನು, ಸಂಸದರನ್ನು ಅಪಹರಿಸುವುದು ಈಗ ಸಾಧ್ಯವಿಲ್ಲ. ಮೈತ್ರಿ ನಾಯಕರು ದುಡ್ಡು, ಕಾಸು ಕೊಟ್ಟು ಅತೃಪ್ತ ಶಾಸಕರನ್ನು ವಾಪಸ್ ಕರೆತರಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ವಿಶ್ವಾಸಮತ ಸಾಬೀತಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದರು.
Comments are closed.