ಮನೋರಂಜನೆ

ತಮಿಳು ಸಂದರ್ಶನದಲ್ಲಿ ನಟಿ ರಶ್ಮಿಕಾ ಮಂದಣ್ಣ ಎಡವಟ್ಟು​!

Pinterest LinkedIn Tumblr


ಬೆಂಗಳೂರು: ಹುಟ್ಟಿದರೆ ಕನ್ನಡ್ ನಾಡಲ್ ಹುಟ್ಟಬೇಕು, ಮೆಟ್ಟಿದರೆ ಕನ್ನಡ್ ನಾಡಲ್ ಮೆಟ್ಟಬೇಕು ಹೀಗಂತ ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ ಡಾ. ರಾಜ್ ​ಕುಮಾರ್ ಕೈಯಲ್ಲಿ ನಾಡಧ್ವಜ ಹಿಡಿದು ಕುಲಕೋಟಿ ಕನ್ನಡಿಗರಿಗೆ ಕೂಗಿ ಹೇಳಿದರು, ಜೀವಿಸಿದರು. ಆದರೆ, ಇಲ್ಲೊಬ್ಬ ನಟಿಶಿರೋಮಣಿ ಮಾತ್ರ ಇಲ್ಲೇ ಹುಟ್ಟಿ, ಇಲ್ಲೇ ಮೆಟ್ಟಿ, ಅದೆಲ್ಲೋ ಹೋಗಿ ನಂಗೆ ಕನ್ನಡ ಮಾತಾಡೋಕ್ಕೆ ಕಷ್ಟ ಆಗುತ್ತೆ ಅಂತಾವ್ಳೆ. ಇದನ್ನ ಕೇಳಿಸ್ಕೊಂಡು ನಮ್ಮವರು ಸುಮ್ನೆ ಇರ್ತಾರೆಯೇ(?) ಖಂಡಿತಾ ಇಲ್ಲ.

ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ ಪದವಾಡ್ತೀನಿ ಅಂತಾರೆ ಜಿ.ಪಿ ರಾಜರತ್ನಂ. ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಅಂತಾರೆ ರಾಷ್ಟ್ರಕವಿ ಕುವೆಂಪು. ಈ ಕನ್ನಡ ಮಣ್ಣನ ಮರೀಬೇಡ ಓ ಅಭಿಮಾನಿ ಅಂದರು ದಿವಂಗತ ರೆಬೆಲ್​ ಅಂಬರೀಷ್. ಹುಟ್ಟಿದರೇ ಕನ್ನಡ್ ನಾಡಲ್ ಹುಟ್ಟಬೇಕು ಅಂದರು ಅಣ್ಣಾವ್ರು. ಇದೆಲ್ಲವೂ ಸ್ವಾಭಿಮಾನಿ ಕನ್ನಡಿಗರ ಕನ್ನಡಾಭಿಮಾನದ ಕೈಗನ್ನಡಿ. ಆದರೆ, ಇಂದಿನ ಅದೆಷ್ಟೋ ಮಂದಿ ನಟೀಮಣಿಯರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ, ಅವರು ಆಡಿದ್ದೇ ಆಟ, ಮಾಡಿದ್ದೇ ಮಾಟವಾಗಿದೆ.

ಈ ಮಾತನ್ನ ನಾವು ಈಗ್ಯಾಕೆ ಹೇಳ್ತಾ ಇದ್ದೀವಿ ಅಂದರೆ ನಮ್ಮ ಕರುನಾಡಿನ ಮಡಿಕೇರಿ ಮೂಲದ ಚೆಲುವೆ ರಶ್ಮಿಕಾ ಮಂದಣ್ಣ ಒಂದು ದೊಡ್ಡ ಎಡವಟ್ ಮಾಡ್ಕೊಂಡ್ಬಿಟ್ಟಿದ್ದಾರೆ. ಪರಭಾಷೆಗಳಲ್ಲಿ ಬಿಗ್ ಸ್ಟಾರ್ಸ್​ ಜೊತೆ ನಟಿಸೋದರ ಮೂಲಕ ಎಲ್ಲರ ಮನೆ ಮಾತಾಗಿದ್ದ ಈಕೆ, ಕನ್ನಡ ನಾಡಿನ ಕೀರ್ತಿ ಪತಾಕೆ ಬೇರೆಡೆ ಹಾರಿಸ್ತಿದ್ದಾರೆ ಅಂದುಕೊಂಡಿದ್ದ ಕನ್ನಡಿಗರಿಗೆ ಶಾಕ್ ಕೊಟ್ಟಿದ್ದಾರೆ. ಅದೇನಪ್ಪಾ ಅಂದ್ರೆ ಇತ್ತೀಚೆಗೆ ತಮಿಳಿನ ಸಂದರ್ಶನವೊಂದರಲ್ಲಿ ನನಗೆ ಕನ್ನಡ ಮಾತಾಡೋದು ಕೂಡ ಸರಿಯಾಗಿ ಬರಲ್ಲ, ತುಂಬಾ ಕಷ್ಟ ಆಗುತ್ತೇ ಅಂದಿದ್ದಾರೆ.

ಮೂರು ವರ್ಷದಲ್ಲಿ ಮಾಡಿದ್ದು 8 ಸಿನಿಮಾ. ಅದರಲ್ಲಿ ಪರಭಾಷಾ ಚಿತ್ರಗಳೇ ಹೆಚ್ಚು. ಆದರೂ ಸಹ, ತೆಲುಗನ್ನ ನೀರು ಕುಡಿದಷ್ಟೇ ಲೀಲಾಜಾಲವಾಗಿ ಮಾತನಾಡೋ ರಶ್ಮಿಕಾ, ಕನ್ನಡದವರಾಗಿದ್ದುಕೊಂಡು ಕನ್ನಡ ಬರಲ್ಲ ಅಂದಿರೋದು ಕನ್ನಡಿಗರನ್ನ ಕೆರಳಿಸಿದೆ. ಒಂದಷ್ಟು ಮಂದಿ ಅವರ ಕೂರ್ಗಿ, ಕೊಡವ ಬಿಟ್ಟು ಕನ್ನಡ ಸ್ಪಷ್ಟತೆ ಇಲ್ಲ ಅಂದಿರೋದ್ರಲ್ಲಿ ಅರ್ಥವಿದೆ ಅಂತಿದ್ದಾರೆ. ಹಾಗಾದ್ರೆ ತೆಲುಗು ಕಲಿಯೋಕ್ಕೂ ಮುನ್ನ ಕನ್ನಡ ಕಲಿಯಬಹುದಿತ್ತಲ್ಲವೇ ಅನ್ನೋದು ಒಂದಷ್ಟು ಮಂದಿ ವಾದವಾಗಿದೆ.

ಅದೇನೇ ಇರಲಿ, ವೈಯಕ್ತಿಕ ಜೀವನದಲ್ಲಿ ಒಂದಷ್ಟು ವಿವಾದಗಳನ್ನ ಮೈಮೇಲೆ ಎಳೆದುಕೊಂಡು, ನಂತ್ರ ಅದೆಲ್ಲವನ್ನ ಸರಿಪಡಿಸಿಕೊಳ್ಳೋ ಸಮಯಕ್ಕೆ ಮತ್ತೆ ಟ್ರ್ಯಾಕ್ ತಪ್ಪಿರೋದು ದುರದೃಷ್ಠಕರ. ಇನ್ನು ಇಂತಹ ಕಿತ್ತೋಗಿರೋ ಸ್ಟೇಟ್​ಮೆಂಟ್​ಗಳನ್ನ ಕೇಳಿಸಿಕೊಳ್ಳೋ ಸ್ವಾಭಿಮಾನಿ ಕನ್ನಡಿಗರು ಕೈಕಟ್ಟಿ ಸುಮ್ಮಮನೆ ಕೂರ್ತಾರೆಯೇ..? ಖಂಡಿತಾ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಇವಮ್ಮಂಗೆ ಹಿಗ್ಗಾಮುಗ್ಗಾ ಗುಮ್ತಾ ಇದ್ದಾರೆ. ಮತ್ತೊಮ್ಮೆ ಕನ್ನಡದ ವಿಚಾರ ಬಂದಾಗ ನಾಲಿಗೆ ಕೊಂಚ ಅದ್ದುಬಸ್ತಿನಲ್ಲಿದ್ರೆ ಅದಕ್ಕಿಂತ ಉತ್ತಮ ಕೆಲಸ ಮತ್ತೊಂದಿರಲಿಕ್ಕಿಲ್ಲ.

Comments are closed.