
ಮುಂಬೈ (ಜು.20): ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಶನಿವಾರ ಹಾಗೂ ಭಾನುವಾರ ಅತೃಪ್ತರನ್ನು ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಲಿದ್ದು, ಈ ಮೂಲಕ ಸರ್ಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಆದರೆ, ಕಾಂಗ್ರೆಸ್ಗೆ ಇದ್ದ ಕೊನೆಯ ಅಸ್ತ್ರವೂ ಇದೀಗ ಟುಸ್ ಆಗಿದೆ.
ಅತೃಪ್ತ ಶಾಸಕರು ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ಈ ಮಧ್ಯೆ ಶ್ರೀಮಂತ ಪಾಟೀಲ್ ಕೂಡ ಮುಂಬೈಗೆ ತೆರಳಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಬಿಜೆಪಿಯವರು ಶ್ರೀಮಂತ ಪಾಟೀಲ್ರನ್ನು ಅಪಹರಣ ಮಾಡಿದ್ದಾರೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿತ್ತು. ಅವರನ್ನು ಸಂಪರ್ಕಿಸಲು ಕಾಂಗ್ರೆಸ್ ಪ್ರಯತ್ನ ಪಡುತ್ತಲೇ ಇದೆ. ಆದರೆ ಅದು ಸಾಧ್ಯವಾಗಿಲ್ಲ. ಈಗ ಕಾಂಗ್ರೆಸ್ನ ಕೊನೆಯ ಪ್ರಯತ್ನವೂ ವಿಫಲವಾಗಿದೆ.
ಮಹಾರಾಷ್ಟ್ರದಲ್ಲಿ ಯಶೋಮತಿ ಠಾಕೂರ್ ಕಾಂಗ್ರೆಸ್ನ ಪ್ರಭಾವಿ ನಾಯಕಿ. ಅವರು ಮಹಾರಾಷ್ಟ್ರ ಕಾಂಗ್ರೆಸ್ನ ಕಾರ್ಯಾಧ್ಯಕ್ಷೆಯೂ ಹೌದು. ಹಾಗಾಗಿ ಮುಂಬೈನ ಸೇಂಟ್ ಜಾರ್ಜ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡುವಂತೆ ರಾಜ್ಯ ನಾಯಕರು ಕೋರಿದ್ದರು. ಈ ನಿರ್ದೇಶನದ ಮೇರೆಗೆ ಅವರು ಆಸ್ಪತ್ರೆಗೆ ತೆರಳಿದ್ದರು.
ಆದರೆ, ಶ್ರೀಮಂತ ಪಾಟೀಲ ಭೇಟಿಗೆ ಪೊಲೀಸರು ಯಶೋಮತಿಗೆ ಅವಕಾಶ ನೀಡಲಿಲ್ಲ. ಇದೇ ವೇಳೆ ಶ್ರೀಮಂತ ಪಾಟೀಲ್ ಪುತ್ರ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರು ಹಾಗೂ ಪಾಟೀಲ್ ಪುತ್ರನ ವರ್ತನೆ ವಿರುದ್ಧ ಯಶೋಮತಿ ಕಿಡಿ ಕಾಡಿದ್ದಾರೆ.
“ನಿಮ್ಮ ತಂದೆಗೆ ಸಿರೀಯಸ್ ಇದ್ರೆ ಈ ಆಸ್ಪತ್ರೆಯಲ್ಲಿ ಏಕೆ ಅಡ್ಮಿಟ್ ಮಾಡಿದ್ದೀರಾ? ಮುಂಬೈನಲ್ಲಿ ಸಾಕಷ್ಟು ಉತ್ತಮ ಆಸ್ಪತ್ರೆಗಳಿವೆ. ಅಲ್ಲಿಗೆ ಅವರನ್ನು ಸೇರಿಸೋಣ,” ಎಂದು ಯಶೋಧ ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪಾಟೀಲ್ ಮಗ, “ಇಲ್ಲ ನಮ್ಮ ತಂದೆಗೆ ಇಲ್ಲಿಯೇ ಉತ್ತಮ ಚಿಕಿತ್ಸೆ ದೊರೆಯುತ್ತದೆ. ಇದೇ ಆಸ್ಪತ್ರೆಲೀ ಇರಲಿ. ಯಾರ ಭೇಟಿಗೂ ಅವಕಾಶ ನೀಡದಂತೆ ವೈದ್ಯರು ಹೇಳಿದ್ದಾರೆ,” ಎಂದಿದ್ದರು.
ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಪೋಲಿಸ್ ಸಿಬ್ಬಂದಿ ವಿರುದ್ಧವೂ ಯಶೋಮತಿ ಸಿಟ್ಟಾಗಿದ್ದಾರೆ. ಇಷ್ಟಾದರೂ ಶ್ರೀಮಂತ ಪಾಟೀಲ್ರನ್ನು ಪೊಲೀಸರು ಅವರಿಗೆ ಅವಕಾಶ ನೀಡಿಲ್ಲ. ಅಲ್ಲಿಗೆ ಕಾಂಗ್ರೆಸ್ನ ಕೊನೆಯ ಅಸ್ತ್ರವೂ ವಿಫಲವಾದಂತಾಗಿದೆ.
Comments are closed.