ಕರ್ನಾಟಕ

ರೋಷನ್ ಬೇಗ್ ತಪ್ಪಿಸಿಕೊಳ್ಳಲು ಯಡಿಯೂರಪ್ಪರ ಆಪ್ತ ಮತ್ತು ಯೋಗೇಶ್ವರ್ ಸಹಾಯ: ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಶಾಸಕ ಆರ್‌. ರೋಷನ್‌ ಬೇಗ್‌ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣ ದಲ್ಲಿ ವಶಕ್ಕೆ ಪಡೆದಿದೆ.

ಈ ಬೆಳವಣಿಗೆ ಕುರಿತಂತೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ರೋಷನ್‌ ಬೇಗ್‌ ತಪ್ಪಿಸಿಕೊಳ್ಳಲು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಸಹಾಯ ಮಾಡುತ್ತಿರುವುದು ಕಂಡು ಬಂದಿದೆ. ಇವರಿಬ್ಬರು ಬಾಡಿಗೆ ವಿಮಾನದಲ್ಲಿ ಮುಂಬಯಿಗೆ ತೆರಳಲು ಯತ್ನಿಸುತ್ತಿದ್ದರು. ಈ ವೇಳೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಬಿಎಸ್‌ವೈ ಆಪ್ತ ಎನ್‌.ಆರ್‌.ಸಂತೋಷ್‌ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಜತೆಗೆ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್‌ ಅವರೂ ಇದ್ದರು ಎಂದಿರುವ ಸಿಎಂ, ಬಿಜೆಪಿ ನೇರವಾಗಿಯೇ ಕುದುರೆ ವ್ಯಾಪಾರಕ್ಕಿಳಿದು ಸರಕಾರವನ್ನು ಪತನಗೊಳಿಸುವ ಯತ್ನಕ್ಕೆ ಕೈಹಾಕಿರುವುದು ಕಂಡು ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಿಎಂ ಮಾಡಿರುವ ಟ್ವೀಟ್‌ಗೆ ಬಿಜೆಪಿ ಟ್ವೀಟ್‌ನಲ್ಲಿಯೇ ತಿರುಗೇಟು ನೀಡಿದೆ. ಸಿಎಂ ಕುಮಾರಸ್ವಾಮಿ ಅವರು ಸರ್ಕಾರವನ್ನು ಉಳಿಸಿಕೊಳ್ಳಲು ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ.

ಜು. 19ರಂದು ಹಾಜರಾಗುವುದಾಗಿ ರೋಷನ್‌ ಬೇಗ್‌ ಹೇಳಿ, ಎಸ್‌ಐಟಿ ಒಪ್ಪಿಗೆಯನ್ನೂ ಪಡೆದಿದ್ದರು. ಹೀಗಿದ್ದೂ ನಿಮ್ಮ ಸರ್ಕಾರ ಶಾಸಕರನ್ನು ಹೇಗೆ ಬ್ಲ್ಯಾಕ್‌ ಮೇಲ್ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟ್ವೀಟಿಸಿದೆ. ಬಿಎಸ್‌ವೈ ಆಪ್ತ ಸಂತೋಷ್‌ ಅವರು ಈ ಸಂದರ್ಭ ಇರಲಿಲ್ಲ. ಬೇಗ್‌ ಒಬ್ಬರೇ ಹೋಗುತ್ತಿದ್ದರು. ಸಿಎಂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

Comments are closed.