
ಬೆಂಗಳೂರು: ಅಡ್ಡದ ಮೇಲೆ ಗುಡ್ಡ ಇಟ್ಟುಕೊಂಡು ಹೆದರಿಸಿಕೊಂಡು ಓಡಾಡೋದಲ್ಲ, ಗೊತ್ತಿದೆ ಬಿಜೆಪಿಯವರು ಏನೇನು ಗಲಾಟೆ ಮಾಡಬೇಕು ಅಂತಿದಾರೆ ಎಂದು ಜಲಸಂಪನ್ಮೂಲ ಸಚಿವ ಡಿ . ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಬಿಜೆಪಿಯವರಿಗೆ ದೇವರು ಒಳ್ಳೆಯದು ಮಾಡಲಿ, ದೇವರಿದ್ದಾನೆ ಎಂದರು. ಅತೃಪ್ತರನ್ನು ಮನವೊಲಿಸೋ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೆಗೌಡ ಮುಂಬೈ ಹೋಗೋ ಬಗ್ಗೆ ಗೊತ್ತಿಲ್ಲ ಎಂದು ಇದೇ ವೇಳೆ ಮಾಧ್ಯಮಗಳಿಗೆ ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ದೋಸ್ತಿ ನಾಯಕರಿಗೆ ಕೈಕೊಟ್ಟು ಮುಂಬೈಗೆ ಹೋಗಿರುವುದು ಮತ್ತು ಎಂಟಿಬಿ ನಾಗರಾಜ್, ಸುಧಾಕರ್ ಮುಂಬೈಗೆ ಹೋಗುವಾಗ ಬಿಜೆಪಿ ನಾಯಕ ಆರ್. ಅಶೋಕ್ ಉಪಸ್ಥಿತಿ ಕಾರಣ ಎಂದು ಬಿಜೆಪಿ ವಿರುದ್ದ ಡಿ. ಕೆ ಶಿವಕುಮಾರ್ ತೀವ್ರವಾದ ವಾಗ್ದಾಳಿ ನಡೆಸಿದ್ದಾರೆ.
ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು. ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ವಿಚಾರ. ನಾವು ಯಾವುದಕ್ಕೂ ತಲೆ ಹಾಕಲ್ಲ ಎಂದು ಹೇಳುತ್ತಿದ್ದರು. ಆದರೆ ಹೋಟೆಲ್, ಏರ್ ಪೋರ್ಟ್, ಫ್ಲೈಟ್ ವ್ಯವಸ್ಥೆ ಸೇರಿದಂತೆ ಎಲ್ಲಾ ಬಿಜೆಪಿಯವರದ್ದೇ ಪ್ಲಾನ್ ಎಂದು ಆಕ್ರೋಶ ಹೊರಹಾಕಿದರು.
ನಾವು ಶಾಂತಿಪ್ರಿಯರು ಅಂತ ಬಿಜೆಪಿಯವರು ಇಂತಹ ಕೆಲಸ ಮಾಡಿದ್ದಾರೆ. ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ನಮಗೆ ಈಗಲೂ ವಿಶ್ವಾಸವಿದೆ. ವಿಶ್ವಾಸಮತ ಸಂದರ್ಭದಲ್ಲಿ ನಮ್ಮ ಶಾಸಕರು ನಮಗೆ ಬೆಂಬಲ ನೀಡುತ್ತಾರೆ. ಈಗಾಗಲೇ ಕಾರ್ಯಕರ್ತರು, ಜನರು ಶಾಸಕರಿಗೆ ರಾಜೀನಾಮೆ ನೀಡದಂತೆ ಮನವಿ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಕರುಣೆ ಬಂದು ನಮ್ಮ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂದು ಅಸಮಾಧಾನಗೊಂಡರು.
Comments are closed.