
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಖಾಸಗಿ ಹೋಟೆಲ್‍ನಲ್ಲಿರುವ ಅತೃಪ್ತ ಶಾಸಕರನ್ನು ಪಕ್ಷದ ರಾಷ್ಟ್ರ ನಾಯಕರು ಸೋಮವಾರ ಮನವೊಲಿಸಲು ಪ್ರಯತ್ನಿಸುವ ಸುಳಿವು ಅರಿತ ಅತೃಪ್ತ ಶಾಸಕರು ಪೊಲೀಸ್ ಮೊರೆ ಹೋಗಿದ್ದು, ಯಾರನ್ನೂ ಹೋಟೆಲ್‍ಗೆ ಪ್ರವೇಶಿಸದಂತೆ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಅತೃಪ್ತರ ಮನವೊಲಿಕೆಗೆ ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೋಟೆಲ್‍ಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಅತೃಪ್ತ ಶಾಸಕರು ಮುಂಬೈಯ ಪೊವಾಯಿ ಪೊಲೀಸ್ ಠಾಣೆಗೆ ದೂರು ನೀಡಿ, ಯಾರಿಗೂ ಹೋಟೆಲ್ ಪ್ರವೇಶ ನೀಡದಂತೆ ಮನವಿ ಮಾಡಿದ್ದಾರೆ.
ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಯಾವ ನಾಯಕರನ್ನೂ ಭೇಟಿಯಾಗಲು ನಮಗೆ ಇಷ್ಟವಿಲ್ಲ. ನಮಗೆ ಅವರಿಂದ ಬೆದರಿಕೆ ಇರುವುದರಿಂದ ಅವರನ್ನು ಭೇಟಿ ಮಾಡುವುದಿಲ್ಲ. ಆದ್ದರಿಂದ ಅವರ ಹೋಟೆಲ್ ಭೇಟಿಯನ್ನು ತಡೆಯಬೇಕು ಎಂದು ಅತೃಪ್ತ ಶಾಸಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿಗೆ ಎಲ್ಲಾ 14 ಮಂದಿ ಶಾಸಕರು ಸಹಿ ಹಾಕಿದ್ದಾರೆ. ಈ ಪತ್ರವನ್ನು ಪೊಲೀಸರು ಮತ್ತು ಹೋಟೆಲ್‍ನ ಪ್ರಧಾನ ವ್ಯವಸ್ಥಾಪಕರಿಗೂ ಸಲ್ಲಿಸಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮುಂಬೈ ಭೇಟಿಯನ್ನು ರದ್ದುಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments are closed.