ಕರ್ನಾಟಕ

ಆರ್​ಎಸ್ಎಸ್​ ಕಟ್ಟಾಳು ಬಿ.ಎಲ್​. ಸಂತೋಷ್​​ಗೆ ಮಹತ್ವದ ಜವಾಬ್ದಾರಿ

Pinterest LinkedIn Tumblr


ಬೆಂಗಳೂರು(ಜುಲೈ.14): ಆರ್​ಎಸ್ಎಸ್​ ಕಟ್ಟಾಳು ಬಿ.ಎಲ್​. ಸಂತೋಷ್​​ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​​ ಶಾ ಅವರ ಸೂಚನೆ ಮೇರೆಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕ್ಕಾರಕ್ಕೆ ಬರುವ ಮುನ್ನವೇ ಸಂತೋಷ್​​​ ಅವರಿಗೆ ಉನ್ನತ ಹುದ್ದೆ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ.

ಈ ಹಿಂದೆಯೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದ ಆರ್​ಎಸ್​ಎಸ್​ ಕಟ್ಟಾಳು ಬಿ.ಎಲ್​. ಸಂತೋಷ್​ ಉನ್ನತ ಸ್ಥಾನಕ್ಕೆ ಏರಲಿದ್ದಾರೆ ಎನ್ನಲಾಗಿತ್ತು. ಅಂತೆಯೇ ಸಂತೋಷ್​ ಆಪ್ತರಿಗೂ ರಾಜ್ಯ ಬಿಜೆಪಿಯಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ ಎಂದೂ ಹೇಳಲಾಗುತ್ತಿತ್ತು.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ರಾಮ್​ಲಾಲ್​ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸ್ಥಾನದ ಮೇಲೆ ಬಿ.ಎಲ್​. ಸಂತೋಷ್​ ಕಣ್ಣಿಟ್ಟಿದ್ದು, ಮತ್ತೆ ಕೇಂದ್ರದಲ್ಲಿ ಅಧಿಕಾರ ಗದ್ದುಗೆಗೇರಿದರೆ ರಾಮ್​ಲಾಲ್​ ಸ್ಥಾನವನ್ನು ಸಂತೋಷ್​ ಪಡೆಯಲಿದ್ದಾರೆ ಎಂದು ತಿಳಿದು ಬಂದಿತ್ತು.

ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಲವರ್ಧನೆಯ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್​ ಕೂಡ ಸಂತೋಷ್​ ಅವರಿಗೆ ಉನ್ನತ ಸ್ಥಾನ ನೀಡಲು ಚಿಂತಿಸಿದೆ ಎಂದೂ ರಾಜ್ಯ ಬಿಜೆಪಿ ನಾಯಕರು ಮಾಹಿತಿ ನೀಡಿದ್ದರು. ಅದರ ಜತೆಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಅವಧಿ ಮುಗಿದು ಆರು ತಿಂಗಳುಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಪ್ರಬಲ ನಾಯಕರು ಈ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ ಎಂದು ಕೂಡ ಮೂಲಗಳು ತಿಳಿಸಿದ್ದವು.

ಹೈಕಮಾಂಡ್​ ಮಟ್ಟದಲ್ಲಿ ಇತ್ತೀಚೆಗೆ ಬಿ.ಎಲ್​. ಸಂತೋಷ್​ ಪ್ರಭಾವಿಯಾಗಿ ಬೆಳೆದಿರುವುದು ಗುಟ್ಟಾಗಿ ಉಳಿದಿರಲಿಲ್ಲ. ರಾಜ್ಯದಲ್ಲೀಗ ಮೈತ್ರಿ ಸರ್ಕಾರ ಕುಸಿದು ಹೋಗುವ ಹಂತದಲ್ಲಿದ್ದು, ಬಿಜೆಪಿ ಅಧಿಕ್ಕಾರಕ್ಕೇರುವ ಸಾಧ್ಯತೆಗಳಿವೆ. ಇದೇ ಹೊತ್ತಲ್ಲಿ ಬಿ.ಎಲ್​. ಸಂತೋಷ್​​ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದು ಚರ್ಚಾ ಕೇಂದ್ರವಾಗಿದೆ.

Comments are closed.