ಕರ್ನಾಟಕ

ಕೊನೆ ಕ್ಷಣದ ಕೈ ಹೋರಾಟಕ್ಕೆ ಕಮಲನಾಥ್ ಮತ್ತು ಗುಲಾಂ ನಬಿ ಆಗಮನ

Pinterest LinkedIn Tumblr


ಬೆಂಗಳೂರು(ಜುಲೈ 13): ಆಪರೇಷನ್ ಕಮಲ, ಅತೃಪ್ತರ ಹಠ, ಸರ್ಕಾರ ಉಳಿಸಿಕೊಳ್ಳಲು ಮಿತ್ರ ಪಕ್ಷಗಳ ಕಸರತ್ತು, ಹೀಗೆ ರಾಜ್ಯ ರಾಜಕಾರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಅಧಿವೇಶನಕ್ಕೆ ಮುನ್ನವೇ ಸರ್ಕಾರ ಉರುಳಿಸಲು ಸ್ಕೆಚ್ ಹಾಕಿದ್ದ ಅತೃಪ್ತರು ಸುಪ್ರೀಂ ತೀರ್ಪಿನಿಂದಾಗಿ ಮಂಗಳವಾರದವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ. ಇದೇ ಸುಪ್ರೀಂ ತೀರ್ಪಿನಿಂದಾಗಿ ಕೆಲ ದಿನಗಳ ಕಾಲ ಬೀಸೋ ದೊಣ್ಣೆಯಿಂದ ಪಾರಾದ ಮಿತ್ರ ಪಕ್ಷಗಳು ಅಸಮಾಧಾನಿತರ ಅತೃಪ್ತಿಯನ್ನು ಕೊನೆಗಾಣಿಸಲು ಅತೀವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕಮಾರ್, ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ಕಣ್ಣಿಗೆ ಎಣ್ಣೆ ಹಾಕಿಕೊಂಡವರಂತೆ ತಮ್ಮ ಶಾಸಕರನ್ನು ಕಾಯುತ್ತಿದ್ದಾರೆ. ಕೇಂದ್ರ ಕಾಂಗ್ರೆಸ್​ನಿಂದ ಗುಲಾಂ ನಬಿ ಆಜಾದ್ ಮತ್ತು ರಾಜ್ಯ ಕೈ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರೂ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಈಗ ಕಾಂಗ್ರೆಸ್​ನ ಮತ್ತೊಬ್ಬ ಟ್ರಬಲ್ ಶೂಟರ್ ಕಮಲನಾಥ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದರೊಂದಿಗೆ ಮೈತ್ರಿಸರ್ಕಾರದ ಅಳಿವು ಉಳಿವಿನ ಹೋರಾಟಕ್ಕೆ ಇನ್ನಷ್ಟು ಜೀವ ಬಂದಂತಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿರುವ ಕಮಲ ನಾಥ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಅವರುಗಳು ಇವತ್ತು ತಡ ರಾತ್ರಿ ನಗರಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಇಡೀ ದಿನ ಈ ಜೋಡೆತ್ತುಗಳು ಸಭೆಗಳ ಮೇಲೆ ಸಭೆ ನಡೆಸಲಿದ್ಧಾರೆ. ಕುಮಾರಕೃಪ ಗೆಸ್ಟ್ ಹೌಸ್​ನಲ್ಲಿ ನಾಳೆ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಲಿದೆ. ಅಸಮಾಧಾನಿತ ಶಾಸಕರು ಇಟ್ಟ ಹೆಜ್ಜೆ ಹಿಂದಿಟ್ಟು ರಾಜೀನಾಮೆ ವಾಪಸ್ ಪಡೆಯುತ್ತಾರಾ ಎಂಬ ಕುತೂಹಲ ಮನೆಮಾಡಿದೆ.

ಹಿರಿಯ ಕೈ ಜೋಡೆತ್ತುಗಳ ಆಗಮನಕ್ಕೆ ಮುನ್ನ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರು ಅಸಮಾಧಾನಿತರ ಮನವೊಲಿಕೆಯಲ್ಲಿ ಒಂದಷ್ಟು ಯಶಸ್ವಿ ಕಂಡಿದ್ದಾರೆ. ರಾಜೀನಾಮೆ ನೀಡಿರುವ 16 ಶಾಸಕರ ಪೈಕಿ ಎಂ.ಟಿ.ಬಿ. ನಾಗರಾಜ್ ಅವರ ಮನವೊಲಿಸುವಲ್ಲಿ ಸಿದ್ದರಾಮಯ್ಯ ಹೆಚ್ಚೂಕಡಿಮೆ ಯಶಸ್ವಿಯಾಗಿದ್ಧಾರೆ. ಸಂಧಾನ ಸಭೆ ಚೆನ್ನಾಗಿ ನಡೆದಿದೆ. ಸಿದ್ದರಾಮಯ್ಯ ಎಲ್ಲಾ ಒಳ್ಳೆಯದನ್ನೇ ಹೇಳಿದ್ದಾರೆ. ನಾವೂ ಕೂಡ ರಾಜೀನಾಮೆ ಹಿಂಪಡೆಯಲು ಒಳ್ಳೆಯ ರೀತಿಯಲ್ಲೇ ಪ್ರಯತ್ನ ಮಾಡಿದ್ದೇವೆ. ಆದರೆ, ತಮ್ಮ ಆತ್ಮೀಯ ಡಾ| ಕೆ. ಸುಧಾಕರ್ ಅವರೊಂದಿಗೆ ಸಮಾಲೋಚನೆ ಮಾಡಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಎಂಟಿಬಿ ಬಹಳ ಸ್ಪಷ್ಟವಾಗಿ ಹೇಳಿದ್ಧಾರೆ.

ಅತ್ತ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ತಮ್ಮ ಎರಡೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ. ಯಾರ ಕೈಗೂ ಅವರು ಸಿಗುತ್ತಿಲ್ಲ. ಸುಧಾಕರ್ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ನಿವಾಸಕ್ಕೆ ಕರೆತರಲು ಜಮೀರ್ ಅಹ್ಮದ್ ಮತ್ತು ಹೆಚ್.ಸಿ. ಮಹದೇವಪ್ಪ ಜೊತೆ ಲೀಲಾ ಪ್ಯಾಲೇಸ್ ಹೋಟೆಲ್​ಗೆ ಹೋದ ಎಂ.ಟಿ.ಬಿ. ನಾಗರಾಜ್ ಕೂಡ ಬರಿಗೈಲಿ ವಾಪಸ್ಸಾಗಬೇಕಾಯಿತು. ಮೂಲಗಳ ಪ್ರಕಾರ, ಡಾ. ಸುಧಾಕರ್ ಅವರು ಸೀದಾ ದೆಹಲಿಗೆ ವಿಮಾನ ಹತ್ತಿ ಹೋಗಿದ್ದಾರೆನ್ನಲಾಗಿದೆ.

ಅತ್ತ, ವಿಶ್ವಾಸ ಮತಯಾಚನೆಗೆ ನಿರ್ಧರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೈ ಬಂಡಾಯ ಶಮನದ ಕಾರ್ಯವನ್ನು ಕೈ ಮುಖಂಡರಿಗೇ ಬಿಟ್ಟು ನಿರುಮ್ಮಳರಾಗಿದ್ದಾರೆ. ಇವತ್ತು ತಾಜ್ ವಿವಂತ್ ಹೋಟೆಲ್​ನಲ್ಲಿರುವ ಕಾಂಗ್ರೆಸ್ ಶಾಸಕರ ಜೊತೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಜಿ. ಪರಮೇಶ್ವರ್ ಅವರು ಸಭೆ ನಡೆಸಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ವಿಶ್ರಾಂತಿಯಲ್ಲಿದ್ದ ಕುಮಾರಸ್ವಾಮಿ ಅವರು ಕೈ ಸಭೆಗೂ ಮುನ್ನ ಕಾವೇರಿ ನಿವಾಸಕ್ಕೆ ತೆರಳಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದರು. ಡಿಕೆ ಶಿವಕುಮಾರ್ ಕೂಡ ಈ ಸಂದರ್ಭದಲ್ಲಿದ್ದರು. ಸರ್ಕಾರ ಉಳಿಸಿಕೊಳ್ಳಲು ಇರುವ ಎಲ್ಲಾ ಮಾರ್ಗಗಳನ್ನೂ ಈ ನಾಯಕರುಗಳು ಅವಲೋಕಿಸುತ್ತಿದ್ದಾರೆ.

ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಮೈತ್ರಿ ಸರ್ಕಾರದ ಅಳಿವು ಉಳಿವು ನಿಂತಿರುವಂತಿದೆ. ಅಷ್ಟರೊಳಗೆ ಹೇಗಾದರೂ ಮಾಡಿ ಅಸಮಾಧಾನಿತರನ್ನು ಮನವೊಲಿಸುವ ಗುರಿ ಮೈತ್ರಿಪಾಳಯದ್ದಾಗಿದೆ.

Comments are closed.