ಕ್ರೀಡೆ

ನ್ಯೂಜಿಲೆಂಡ್-ಇಂಗ್ಲೆಂಡ್ ನಡುವೆ ಚೊಚ್ಚಲ ವಿಶ್ವಕಪ್ ಕಿರೀಟ ಯಾರಿಗೆ?

Pinterest LinkedIn Tumblr


ಭಾನುವಾರ ಕ್ರಿಕೆಟ್ ಕಾಶಿ ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ವಿಶ್ವಕಪ್​ ಮೆಗಾ ಫೈನಲ್ ನಡೆಯಲಿದೆ. ವಿಶ್ವವೇ ಕಾತುರದಿಂದ ಕಾಯುತ್ತಿರುವ ಕ್ರಿಕೆಟ್ ಕದನದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.

ಚೊಚ್ಚಲ ಬಾರಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಕುವ ಅವಕಾಶ ಯಾವ ತಂಡಕ್ಕೆ ಲಭಿಸಲಿದೆ ಎಂಬ ಕುತೂಹಲ ಕ್ರಿಕೆಟ್​ ಪ್ರೇಮಿಗಳಲ್ಲಿದ್ದು, ಅತ್ತ ಕ್ರಿಕೆಟ್ ಜನಕ ಇಂಗ್ಲೆಂಡ್ ಫೇವರೇಟ್ ತಂಡ ಎನ್ನಲಾಗುತ್ತಿದೆ. ಆದರೆ ಭಾರತದ ವಿರುದ್ಧ ಸೆಮಿಫೈನಲ್​ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿರುವ ನ್ಯೂಜಿಲೆಂಡ್ ತಂಡವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ.

ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲುಣಿಸಿ ಫೈನಲ್​ಗೇರಿರುವ ಇಯಾನ್ ಮೋರ್ಗನ್​ ಪಡೆ ಆತ್ಮ ವಿಶ್ವಾದಿಂದ ಪುಟಿಯುತ್ತಿದ್ದರೆ, ಟೀಂ ಇಂಡಿಯಾವನ್ನು ಸಾಧಾರಣ ರನ್​ಗಳಿಗೆ ಕಟ್ಟಿ ಹಾಕಿದ ಉತ್ಸಾಹದಲ್ಲಿದೆ ಕೇನ್ ವಿಲಿಯಮ್ಸನ್ ಬಳಗ. ಹೀಗಾಗಿ ಫೈನಲ್​ ಪಂದ್ಯವು ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಇಲ್ಲಿ ಇಂಗ್ಲೆಂಡ್ ತಂಡಕ್ಕೆ ತವರಿನ ಬೆಂಬಲವು ಪ್ಲಸ್ ಆಗುವ ಸಾಧ್ಯತೆಯಿದ್ದರೂ, ಈ ಹಿಂದೆ 1979, 1987 ಹಾಗೂ 1992ನೇ ಇಸವಿಗಳಲ್ಲಿ ಅಂತಿಮ ಹಂತದಲ್ಲಿ ಆಂಗ್ಲರು ಮುಗ್ಗರಿಸಿರುವುದನ್ನು ಅಲ್ಲೆಗೆಳೆಯುವಂತಿಲ್ಲ. ಹಾಗೆಯೇ ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ ತಂಡ ರನ್​ರೇಟ್​ ಸಹಾಯದಿಂದ ಸೆಮಿಫೈನಲ್​ಗೇರಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕಿವೀಸ್ ಆಟಗಾರರು ಕಳೆದ ಬಾರಿಯ ತಪ್ಪುಗಳನ್ನು ಸರಿಪಡಿಸಿ ಚಾಂಪಿಯನ್ ಆಗುವ ತವಕದಲ್ಲಿದೆ.

ಜೇಸನ್ ರಾಯ್, ಜಾನಿ ಬೈರ್​ಸ್ಟೋ, ಜೋ ರೂ, ಬೆನ್​ ಸ್ಟೋಕ್ಸ್ ಹಾಗೂ ನಾಯಕ ಇಯಾನ್ ಮೋರ್ಗನ್​ರ ಬ್ಯಾಟಿಂಗ್​ ಅನ್ನು ನೆಚ್ಚಿಕೊಂಡಿದ್ದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧದ ಕಳೆದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿ ಗಮನ ಸೆಳೆದಿತ್ತು. ಹೀಗಾಗಿ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮಲಯಕ್ಕೆ ಮರಳಿದೆ ಎನ್ನಬಹುದು.

ಹಾಗೆಯೇ ಭಾರತದ ವಿರುದ್ಧದ ಪಂದ್ಯದಲ್ಲಿ ರಾಸ್ ಟೇಲರ್ ಫಾರ್ಮ್​ಗೆ ಮರಳಿರುವುದು ಕಿವೀಸ್ ಬಳಗದ ಹೊಸ ನಿರೀಕ್ಷೆ. ಇನ್ನು ಬ್ಯಾಟಿಂಗ್​ನಲ್ಲಿ ನಾಯಕ ಕೇನ್​ ವಿಲಿಯಮ್ಸನ್ ಮಾತ್ರ ಮಿಂಚುತ್ತಿದ್ದು, ಉಳಿದ ಆಟಗಾರರಿಂದ ಉತ್ತಮ ಕಾಣಿಕೆ ಮೂಡಿಬರುತ್ತಿಲ್ಲ ಎಂಬುದೇ ನ್ಯೂಜಿಲೆಂಡ್ ತಂಡದ ಚಿಂತೆಗೆ ಕಾರಣ. ಇನ್ನು ಟ್ರೆಂಟ್ ಬೌಲ್ಟ್ ಹಾಗೂ ಲೂಕಿ ಫೇರ್ಗುಸನ್ ಉತ್ತಮವಾಗಿಯೇ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಇವರಿಗೆ ಸಾಥ್ ನೀಡುವಲ್ಲಿ ಸ್ಪಿನ್ನರ್ ಸ್ಯಾಂಟ್ನರ್ ಕೂಡ ಯಶಸ್ವಿಯಾಗಿದ್ದಾರೆ. ಹೀಗಾಗಿ ಫೈನಲ್ ಪಂದ್ಯವು ಇಂಗ್ಲೆಂಡ್ ಬ್ಯಾಟಿಂಗ್ ಹಾಗೂ ನ್ಯೂಜಿಲೆಂಡ್ ಬೌಲಿಂಗ್​ ಅನ್ನು ಅವಲಂಭಿಸಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎರಡು ತಂಡಗಳ ಒಟ್ಟಾರೆ ಬಲಾಬಲ:
ಉಭಯ ತಂಡಗಳ ಫೈನಲ್​ ಪಂದ್ಯಗಳನ್ನು ಅಂಕಿ ಅಂಶಗಳನ್ನು ಗಮನಿಸಿದರೆ ಎರಡು ತಂಡಗಳ ಪ್ರದರ್ಶನ ಕಳಪೆಯಾಗಿದೆ. ಐಸಿಸಿ ಏಕದಿನ ಟೂರ್ನಿಯಲ್ಲಿ ನ್ಯೂಜಿಲೆಂಡ್ 22 ಬಾರಿ ಫೈನಲ್ ಆಡಿದ್ದು, ಅದರಲ್ಲಿ ಕೇವಲ 5 ರಲ್ಲಿ ಮಾತ್ರ ಗೆದ್ದಿದೆ. ಹಾಗೆಯೇ 24 ಬಾರಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ತಂಡ 8 ಫೈನಲ್​ಗಳನ್ನು ಮಾತ್ರ ಗೆದ್ದುಕೊಂಡಿದೆ. ಇನ್ನು ವಿಶ್ವಕಪ್​​​ ಟೂರ್ನಿಯಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ಮೂರರಲ್ಲೂ ಸೋಲುಂಡಿದೆ. ಹಾಗೆಯೇ 2015 ರಲ್ಲಿ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ಆಸೀಸ್ ವಿರುದ್ದ ಶರಣಾಗಿತ್ತು. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳ ಪ್ರದರ್ಶನ ಸಮಬಲದಿಂದ ಕೂಡಿದೆ ಎನ್ನಬಹುದು.

ಚೇಸಿಂಗ್​ಗೆ ಸಹಕಾರಿ:

ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯಗಳಲ್ಲಿ ಮೂರು ಬಾರಿ ಮಾತ್ರ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. 1975, 1979 ರಲ್ಲಿ ವೆಸ್ಟ್​ ಇಂಡೀಸ್ ಗೆದ್ದರೆ 1983ರಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ಚೊಚ್ಚಲ ವಿಶ್ವಕಪ್ ಕಿರೀಟ ಧರಿಸಿತ್ತು. ಹಾಗೆಯೇ ಲಾರ್ಡ್ಸ್​ ಮೈದಾನದಲ್ಲಿ ಆಡಲಾದ ಕಳೆದ 8 ಏಕದಿನ ಫೈನಲ್ ಪಂದ್ಯಗಳಲ್ಲಿ ಒಂದು ಪಂದ್ಯ ಟೈಯಾದರೆ, 6 ಬಾರಿ ಸೆಕೆಂಡ್ ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಇಲ್ಲಿನ ಪಿಚ್ ಚೇಸಿಂಗ್​ಗೆ ಸಹಕಾರಿ ಎನ್ನಲಾಗಿದೆ.

ಲೀಗ್ ಹಂತದಲ್ಲಿ ಇಂಗ್ಲೆಂಡ್ ಅಬ್ಬರ:

ಲೀಗ್ ಹಂತದಲ್ಲಿ ಆಡಲಾದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಇಂಗ್ಲೆಂಡ್ 119 ರನ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಇಂಗ್ಲೆಂಡ್ ನೀಡಿದ 305 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್ ಪಡೆ 186 ರನ್​ಗಳಿಗೆ ಸರ್ವಪತನ ಕಂಡಿತು. ಈ ಗೆಲುವು ಇಂಗ್ಲೆಂಡ್ ಆಟಗಾರರ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದೆ.

ಬೈರ್​ಸ್ಟೋ ಅಬ್ಬರ:

ನ್ಯೂಜಿಲೆಂಡ್ ವಿರುದ್ಧದ ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ಜಾನಿ ಬೈರ್​ಸ್ಟೋ ಮೂರು ಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ ಕಿವೀಸ್ ವಿರುದ್ಧದ ಕಳೆದ 7 ಏಕದಿನ ಪಂದ್ಯಗಳಲ್ಲಿ ಬೈರ್​ಸ್ಟೋ 491 ರನ್​ಗಳನ್ನು ಕಲೆ ಹಾಕಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಬೌಲರುಗಳನ್ನು ಇಂಗ್ಲೆಂಡ್ ಆರಂಭಿಕ ಲೀಲಾಜಾಲವಾಗಿ ಎದುರಿಸುವ ವಿಶ್ವಾಸದಲ್ಲಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಬೈರ್​ಸ್ಟೋ ಶತಕ ಬಾರಿಸಿದರೆ ಒಂದು ತಂಡದ ವಿರುದ್ಧ ಸತತ ನಾಲ್ಕು ಸೆಂಚುರಿ ಬಾರಿಸಿದ ವಿಶ್ವದ 2ನೇ ಆಟಗಾರನೆಂಬ ಖ್ಯಾತಿಗೆ ಇಂಗ್ಲೆಂಡ್ ಓಪನರ್ ಪಾತ್ರರಾಗಲಿದ್ದಾರೆ. ಈ ಹಿಂದೆ ಇಂತಹದೊಂದು ಸಾಧನೆಯನ್ನು ವೆಸ್ಟ್​ ಇಂಡೀಸ್ ವಿರುದ್ದ ವಿರಾಟ್ ಕೊಹ್ಲಿ ಮಾಡಿದ್ದರು.

ಲಾರ್ಡ್ಸ್​ನಲ್ಲಿ ಕಿವೀಸ್ ಮೇಲುಗೈ:
ಇನ್ನು ಲಾರ್ಡ್ಸ್​ ಮೈದಾನದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಅದರಲ್ಲೂ ಕ್ರಿಕೆಟ್ ಕಾಶಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಕಿವೀಸ್ ಪಡೆಯು ಎರಡು ಬಾರಿ ಗೆದ್ದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ಎಡಗೈ ವೇಗಿಗಳಿಗೆ ಸಹಕಾರಿ:
ಈ ಮೈದಾನಲ್ಲಿ ಆಡಲಾದ ಕಳೆದ ನಾಲ್ಕು ಪಂದ್ಯಗಳಲ್ಲಿ ಎಡಗೈ ವೇಗಿಗಳು 39 ವಿಕೆಟ್​ಗಳನ್ನು ಕಿತ್ತಿದ್ದಾರೆ. ಇಲ್ಲಿ ಲೆಫ್ಟ್ ಆರ್ಮ್​ ಬೌಲರುಗಳು ಎರಡು ಬಾರಿ 4 ವಿಕೆಟ್​ಗಳ ಗುಚ್ಛ ಪಡೆದರೆ, ನಾಲ್ಕು ಬಾರಿ 5 ವಿಕೆಟ್​ಗಳ ಗುಚ್ಛಗಳ ಸಾಧನೆ ಮಾಡಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಏಕೈಕ ಎಡಗೈ ವೇಗಿಯಾಗಿ ನ್ಯೂಜಿಲೆಂಡ್​ನ ಟ್ರೆಂಟ್ ಬೌಲ್ಟ್ ಕಣಕ್ಕಿಳಿಯಲಿದ್ದಾರೆ. ಇದು ಕಿವೀಸ್ ತಂಡದ ಪಾಲಿಗೆ ವರದಾನವಾಗುವ ಸಾಧ್ಯತೆಯಿದೆ.

ಬೌಲರುಗಳ ಪರಾಕ್ರಮ:
ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಜೋಫ್ರಾ ಆರ್ಚರ್ (19) ಮೂರನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ವೇಗಿ ಲೂಕಿ ಫೆರ್ಗುಸನ್(18) ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ಟ್ರೆಂಟ್ ಬೌಲ್ಟ್(17) ಏಳನೇ ಸ್ಥಾನವನ್ನು, ಇಂಗ್ಲೆಂಡ್ ಬೌಲರ್ ಮಾರ್ಕ್​ವುಡ್(17) 8ನೇ ಸ್ಥಾನವನ್ನ ಅಲಂಕರಿಸಿದ್ದಾರೆ. ಉಭಯ ತಂಡಗಳಲ್ಲೂ ವಿಕೆಟ್ ಟೇಕರ್​ ಬೌಲರುಗಳಿರುವುದು ಫೈನಲ್​ ಪಂದ್ಯ ವೇಗಿಗಳ ಆಟವಾಗಿ ಮಾರ್ಪಡುವ ಸಾಧ್ಯತೆಯಿದೆ.

ರನ್​ ಮಿಷಿನ್:
ಇನ್ನು ಈ ಬಾರಿಯ ವಿಶ್ವಕಪ್​ನಲ್ಲಿ ರನ್ ಮಳೆ ಹರಿಸಿದವರಲ್ಲಿ ನಾಲ್ವರು ಫೈನಲ್ ಪಂದ್ಯವಾಡಲಿದ್ದಾರೆ. 549 ರನ್​ ಬಾರಿಸಿರುವ ಜೋ ರೂಟ್ ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, 548 ರನ್​ಗಳೊಂದಿಗೆ ನ್ಯೂಜಿಲೆಂಡ್ ನಾಯಕ ನಂತರದ ಸ್ಥಾನದಲ್ಲಿದ್ದಾರೆ. ಅದೇ ರೀತಿ ಜಾನಿ ಬೈರ್​ಸ್ಟೋ(496) 7ನೇ ಹಾಗೂ ಜೇಸನ್ ರಾಯ್ (426) 10ನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಮೂವರು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳಿರುವುದು ತಂಡದ ಬ್ಯಾಟಿಂಗ್ ಶಕ್ತಿಯನ್ನು ತೋರಿಸುತ್ತದೆ.

ಮುಖಾಮುಖಿ:
ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ 90 ಬಾರಿ ಮುಖಾಮುಖಿ ಆಗಿದ್ದು ಉಭಯ ತಂಡಗಳ ಸೋಲು ಗೆಲುವಿನ ಲೆಕ್ಕಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿಲ್ಲ. ಇದರಲ್ಲಿ ನ್ಯೂಜಿಲೆಂಡ್ 43ರಲ್ಲಿ ಗೆಲುವು ಸಾಧಿಸಿದರೆ, ಇಂಗ್ಲೆಂಡ್ 41 ರಲ್ಲಿ ವಿಜಯ ಸಾಧಿಸಿದೆ. ಇನ್ನು 4 ಪಂದ್ಯಗಳು ಫಲಿತಾಂಶ ರಹಿತವಾಗಿದ್ದು, 2 ಪಂದ್ಯಗಳು ಟೈ ಆಗಿವೆ. ಹಾಗೆಯೇ ವಿಶ್ವಕಪ್​ನಲ್ಲಿ ಉಭಯ ತಂಡಗಳು 9 ಬಾರಿ ಸೆಣಸಿದ್ದು, ಇಂಗ್ಲೆಂಡ್ 4ರಲ್ಲಿ ಗೆದ್ದರೆ, ಕಿವೀಸ್ ಪಡೆ 5 ರಲ್ಲಿ ಗೆದ್ದುಬೀಗಿದೆ.

ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲದಿಂದ ಕೂಡಿದೆ ಎನ್ನಬಹುದು. ಹೀಗಾಗಿ ಫೈನಲ್​ ಪಂದ್ಯವು ರೋಚಕ ಹೋರಾಟಕ್ಕೆ ಕಾರಣವಾಗಲಿದೆ. ಒಟ್ಟಿನಲ್ಲಿ ಒಂದುವರೆ ತಿಂಗಳ ಕಾಯುವಿಕೆಗೆ ಭಾನುವಾರ ಉತ್ತರ ದೊರೆಯಲಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ಚಾಂಪಿಯನ್ ಉದಯವಾಗಲಿದೆ.

Comments are closed.