(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತೆಕ್ಕಟ್ಟೆಯ ದಿ ಫಾಲ್ಕನ್ ಕ್ಲಬ್ ವತಿಯಿಂದ ರಾಷ್ಟ್ರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ಗೋಲ್ಡನ್ ಟ್ರೋಫಿ’ಯು ಫೆ.3,4 ಹಾಗೂ 5ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ದಿ ಫಾಲ್ಕನ್ ಕ್ಲಬ್ ಅಧ್ಯಕ್ಷ ಸಲಾಂ ಹೇಳಿದರು.
ಕುಂದಾಪುರದ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಜೆ ಹೊತ್ತು ಸಮಯ ಕಳೆಯಲು ಕ್ರಿಕೆಟ್, ವಾಲಿಬಾಲ್ ಆಡುತ್ತಿದ್ದ ಯುವಕರ ಗುಂಪು 1986ರಲ್ಲಿ ಸದಭಿರುಚಿಯ ಸಮಾಜಮುಖಿ ಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಫಲವೇ ಫಾಲ್ಕನ್ ಕ್ಲಬ್ ಹುಟ್ಟಿಕೊಂಡಿತು. ಆಟೋಟಗಳ ಆಯೋಜನೆಯ ಜೊತೆ ಜೊತೆಗೆ, ಹತ್ತಾರು ಸಮಾಜದ ಅಭಿವೃದ್ಧಿಗೆ ಪೂರಕವಾದ ಹೊಚ್ಚ ಹೊಸ ಕನಸುಗಳನ್ನು ಕಟ್ಟಿಕೊಂಡು, ಅದನ್ನು ಯಶಸ್ವಿಯಾಗಿ ಸಾಕಾರಗೊಳಿಸಿದೆ. ಈತನಕ ಹಲವಾರು ಸ್ಮರಣೀಯ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿದ್ದು ಈ ಬಾರಿ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಸುವ ಮೂಲಕ ಫಾಲ್ಕನ್ ಕ್ಲಬ್ ನಲ್ಲಿರುವ ಅಂಬುಲೆನ್ಸ್ ವಾಹನದ ಸುಸ್ಥಿತಿ ಮಾಡಿ ಅದರ ನಿರ್ವಹಣೆಯೊಂದಿಗೆ ಸಾರ್ವಜನಿಕ ಸೇವೆಗೆ ಉಪಯೋಗಿಸಲು ಉದ್ದೇಶಿಸಲಾಗಿದೆ ಎಂದರು.
ಫಾಲ್ಕನ್ ಕ್ಲಬ್ ಗೋಲ್ಡನ್ ಟ್ರೋಫಿ ಪಂದ್ಯಾಟ ಸಮಿತಿ ಪದಾಧಿಕಾರಿ ಮುತ್ತಾರಿಫ್ ತೆಕ್ಕಟ್ಟೆ ಮಾತನಾಡಿ, ಹಗಲು ರಾತ್ರಿ ನಡೆಯುವ ಪಂದ್ಯಾಟ ಇದಾಗಿದೆ. ಫೆ.3 ಸಂಜೆ 6.30ಕ್ಕೆ ಉದ್ಯಮಿ ಅಸ್ಮತ್ ಅಲಿ ಖತಾರ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು ಹಲವು ಗಣ್ಯರು ಪಾಲ್ಘೊಳ್ಳಲಿದ್ದಾರೆ. ಸಮಾರೋಪದಂದು ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಚಿತ್ರತಂಡ ಭಾಗವಹಿಸಲಿದೆ. ಕ್ರಿಕೆಟ್ ಪಂದ್ಯಾಟಕ್ಕೆ ಬೆಂಗಳೂರು, ಮೈಸೂರು, ದಾವಣಗೆರೆ ಸಹಿತ ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯ ಚೆನ್ನೈಯಿಂದ ತಂಡಗಳು ಹೆಸರು ನೊಂದಾಯಿಸಿದ್ದು 22 ತಂಡಗಳು ಆಗಮಿಸಲಿದೆ. ಪ್ರಥಮ ಬಹುಮಾನ 3,03,333 ರೂ., ದ್ವಿತೀಯ 2,02,222ರೂ. ಹಾಗೂ ಮ್ಯಾನ್ ಆಪ್ ಧ ಮ್ಯಾಚ್‌ಗೆ 55,055 ಪ್ರಮುಖ ಬಹುಮಾನವಿರಲಿದೆ. ಲೀಗ್ನಾಕೌಟ್ ಮಾದರಿಯ ಪಂದ್ಯಾಕೂಟ ಇದಾಗಿದ್ದು ತೃತೀಯ ಅಂಪೈರ್ ತೀರ್ಮಾನದ ಸೌಲಭ್ಯವಿದೆ. ಪ್ರತೀ ಟೀಮಿಗೂ ಪ್ರತ್ಯೇಕ ಡ್ರೆಸ್ ಕೋಡ್ ಹಾಗೂ ಅನುಭವಿಗಳಿಂದ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಕಾಮಿಂಟರಿ, ಸುಸಜ್ಜಿತ ವೀಕ್ಷಕರ ಗ್ಯಾಲರಿ, ಎಲ್.ಇ.ಡಿ ಪರದೆ, ಹಾಗೂ ಪಾರ್ಕಿಂಗ್ ವ್ಯವಸ್ಥೆಯಿರಲಿದೆ ಎಂದವರು ಮಾಹಿತಿ ನೀಡಿದರು.
ಗೋಲ್ಡನ್ ಟ್ರೋಫಿ ಪಂದ್ಯಾಟ ಸಮಿತಿ ಅಧ್ಯಕ್ಷ ಆದಿಲ್, ಕಾರ್ಯದರ್ಶಿ ಸಲೀಂ, ಪದಾಧಿಕಾರಿಗಳಾದ ವಿಜಯ ಭಂಡಾರಿ ತೆಕ್ಕಟ್ಟೆ, ಇರ್ಫಾನ್ ಯು.ಎಸ್., ಮೊಹಮ್ಮದ್ ಇರ್ಫಾನ್, ಲತೀಫ್ ಪ್ರತಿಕಾಗೋಷ್ಠಿಯಲ್ಲಿದ್ದರು.
Comments are closed.