ಕರ್ನಾಟಕ

ನನ್ನನ್ನು ಬಲವಂತವಾಗಿ ಮುಂಬೈನಿಂದ ಹೊರಹಾಕಲಾಗಿದೆ; ಡಿಕೆಶಿ

Pinterest LinkedIn Tumblr


ಮುಂಬೈ (ಜು.10): ನನ್ನನ್ನು ಮುಂಬೈನಿಂದ ಬಲವಂತವಾಗಿ ಹೊರಹಾಕಲಾಗಿದ್ದು, ಅನಿವಾರ್ಯವಾಗಿ ನನ್ನ ಸ್ನೇಹಿತರನ್ನು ಭೇಟಿಯಾಗದೆ ಹೊರಡಬೇಕಾಗಿದೆ ಎಂದು ಮಹಾರಾಷ್ಟ್ರ ಪೊಲೀಸರ ವಿರುದ್ಧ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​ ಕಿಡಿಕಾರಿದ್ದಾರೆ.

ಮುಂಜಾನೆಯಿಂದ ಮುಂಬೈನಲ್ಲಿ ಹೈ ಡ್ರಾಮ ಸೃಷ್ಟಿಸಿದ್ದ ಡಿಕೆ ಶಿವಕುಮಾರ್​ ಮತ್ತು ಅವರ ತಂಡವನ್ನು ಪೊಲೀಸರು ಮಧ್ಯಾಹ್ನದ ವೇಳೆಗೆ ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು. ಆ ಬಳಿಕ ಮಾತನಾಡಿದ ಅವರು, ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಸ್ನೇಹಿತರನ್ನು ಭೇಟಿಯಾಗಲು ನಾನು ಮುಂಬೈಗೆ ಬಂದಿದ್ದೆ. ಅದರಲ್ಲಿಯೂ ಹೊಟೇಲ್​ ಒಳಗಿರುವ ಕೆಲವು ಶಾಸಕರೇ ನನ್ನನ್ನು ಬರಲು ತಿಳಿಸಿದ್ದರು. ನಾನು ರೂಮ್​ ಕಾಯ್ದಿರಿಸಿಕೊಂಡು ಕಾನೂನು ಬದ್ಧವಾಗಿಯೇ ಬಂದಿದ್ದೇನೆ. ಇಲ್ಲಿಗೆ ಬಂದಾಕ್ಷಣ ರೂಂ ಕೀ ಕೊಟ್ಟ ಹೋಟೆಲ್​ ಸಿಬ್ಬಂದಿ ಬಳಿಕ ರೂಂ ಕ್ಯಾನ್ಸಲ್​ ಮಾಡಿದರು ಎಂದರು.

ಶಾಸಕರನ್ನು ಭೇಟಿ ಮಾಡಲು ಮುಂಬೈ ಪೊಲೀಸರು ಬಿಡಲಿಲ್ಲ. ಏನೇ ಆದರೂ ಅವರನ್ನು ಭೇಟಿಮಾಡಲೇಬೇಕೆಂದು ನಿರ್ಧರಿಸಿದೆ. ಆದರೆ ಪೊಲೀಸರು ನನ್ನನ್ನು ಮುಂಬೈನಿಂದ ಬಲವಂತವಾಗಿ ಹೊರಕಳುಹಿಸಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ನೀತಿಯಂತೆ ಮುಂಬೈ ಪೊಲೀಸರು ವರ್ತಿಸಿದರು. ಮುಂಬೈ ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ದೇಶಪೂರ್ವಕವಾಗಿ ನನ್ನ ಪ್ರವೇಶ ತಡೆ ಹಿಡಿದರು. ಸೆಕ್ಷನ್​ 144 ಜಾರಿ ಮಾಡಿದರು ಎಂದು ಆಕ್ರೋಶ ಹೊರಹಾಕಿದರು.

ಈಗ ನನ್ನನ್ನು ನಗರದಿಂದ ಹೊರಗಡೆ ಹಾಕಲಾಗಿದ್ದು, ಅನಿವಾರ್ಯವಾಗಿ ನಾನು ಹೋಗಲೇಬೇಕಿದೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಶಾಸಕರು ಬೆಂಬಲ ನೀಡಿದ್ದು, ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ದೇಶಾದ್ಯಂತ ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಈ ಬಿಕ್ಕಟ್ಟನ್ನು ಕಾಂಗ್ರೆಸ್​ ಒಳಜಗಳ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದರ ಹಿಂದೆ ಬಿಜೆಪಿ ಇದೆ. ಯಾವತ್ತಾದರೂ ಒಂದು ದಿನ ಎಲ್ಲರೂ ಸಾಯಲೇಬೇಕು
ಸಾಯೋ ಮುನ್ನ ಮಾಡೋ ಕೆಲಸ ಮುಖ್ಯ ಆಗುತ್ತದೆ. ನನ್ನ ಜನರು ಪಕ್ಷದ ಜನರನ್ನು ಕಾಪಾಡುವುದು ನನ್ನ ಜವಾಬ್ದಾರಿ. ಜೈಲಿಗೆ ಹಾಕಿದರೂ ಚಿಂತೆ ಇಲ್ಲ ಎಂದರು.

ನಾನು ಹೋಗಲು ಈಗಲೂ ಇಷ್ಟ ಇಲ್ಲ. ಆದರೆ ನನ್ನ ಸ್ನೇಹಿತರು, ನಾಯಕರು ಕಾನೂನು ಸುವ್ಯವಸ್ಥೆ ಕಾಪಾಡಲು ನಾನು ನಿರ್ಗಮಿಸುವುದು ಒಳಿತು ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನಾನು ಮುಂಬೈ ಬಿಡುತ್ತಿದ್ದೇನೆ ಎಂದು ತಿಳಿಸಿದರು.

ನಮ್ಮ ಎಲ್ಲಾ ಶಾಸಕರು ಬೆಂಗಳೂರಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಮೈತ್ರಿ ಸರ್ಕಾರ ಈಗಲೂ ಸೇಫ್​ ಆಗಿದೆ. ಯಾವ ಶಾಸಕರು ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ತಮಗೆ ಸಾಥ್​ ನೀಡಿದ್ದ ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರಿಗೆ ಧನ್ಯವಾದ ತಿಳಿಸಿದರು.

ಅತೃಪ್ತ ಶಾಸಕರ ಮನವೊಲಿಕೆಗಾಗಿ ಮುಂಜಾನೆ ಮುಂಬೈಗೆ ಬಂದಿದ್ದ ಸಚಿವ ಡಿಕೆ ಶಿವಕುಮಾರ್​ಗೆ ಇಲ್ಲಿನ ಪಂಚಾತಾರ ಹೋಟೆಲ್ ರೆನೈಸೆನ್ಸ್​​ ಪ್ರವೇಶಕ್ಕೆ ಪೊಲೀಸರು ತಡೆ ನೀಡಿದರು. ಶಿವಕುಮಾರ್​ ಬರುತ್ತಿರುವ ವಿಚಾರ ತಿಳಿದು ರೆಬೆಲ್​ ಶಾಸಕರು ರಕ್ಷಣೆ ಕೋರಿದ ಹಿನ್ನೆಲೆ ಹೋಟೆಲ್​ ಸುತ್ತ ಬಿಗಿ ಬಂದೋಬಸ್ತ್​ ಮಾಡಿ ಅವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಅವರು ಕಾಯ್ದಿರಿಸಿದ್ದ ಹೊಟೇಲ್​ ರೂಂ ಬುಕ್ಕಿಂಗ್​ ರದ್ದು ಮಾಡಿ ಅವರು ರಸ್ತೆಯಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಏನಾದರೂ ಸರಿ ಹೋಟೆಲ್​ ಪ್ರವೇಶಕ್ಕೆ ಬಿಡುವರೆಗೂ ಪ್ರತಿಭಟನೆ ಮಾಡುತ್ತೇನೆ ಎಂದು ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್​ ಅವರನ್ನು ಮಧ್ಯಾಹ್ನ 3ಗಂಟೆ ಸಮಯಕ್ಕೆ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಒಂದೂವರೆ ಗಂಟೆಗಳ ಪೊಲೀಸ್​ ವಶದಲ್ಲಿದ್ದ ಅವರನ್ನು ಬಿಕೆಸಿ ಗೆಸ್ಟ್​ಹೌಸ್​ಗೆ ಕರೆದುಕೊಂಡು ಹೋಗಿದ್ದರು. ಆದಾದ ಬಳಿಕ ಅವರಿಗೆ ವಾಣಿಜ್ಯ ನಗರಿಯನ್ನು ಬಿಡುವಂತೆ ತಾಕೀತು ಮಾಡಿದ್ದರು.

Comments are closed.