
ರಾಜಕೀಯ ಬಿಕ್ಕಟ್ಟಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಐವರು ಶಾಸಕರ ರಾಜೀನಾಮೆ ಮಾತ್ರ ಸ್ವೀಕೃತಗೊಂಡಿದೆ. ಉಳಿದ 8 ಮಂದಿ ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಉಸಿರಾಡಲು ಅವಕಾಶ ಸಿಕ್ಕಿದಂತಾಗಿದೆ. ಸರ್ಕಾರ ರಕ್ಷಿಸಲು ದೋಸ್ತಿ ನಾಯಕರಿಗೆ ಎರಡು, ಮೂರು ದಿನಗಳ ಕಾಲ ಅವಕಾಶ ಸಿಕ್ಕಿದೆ.
ಐಸಿಯುನಲ್ಲಿರುವ ಮೈತ್ರಿ ಸರ್ಕಾರಕ್ಕೆ ಸ್ಪೀಕರ್ ಆಕ್ಸಿಜನ್ ನೀಡಿದ್ದಾರೆ. ಇದರಿಂದ ಸದ್ಯಕ್ಕಂತೂ ಸರ್ಕಾರ ಸೇಫ್ ಆಗಿದೆ. ಹಾಗೆಯೇ, ಅತೃಪ್ತ ಶಾಕರಿಗೆ ಸ್ಪೀಕರ್ ಶಾಕ್ ಕೊಟ್ಟಿದ್ದಾರೆ. ಇಂದು 13 ಮಂದಿ ಶಾಸಕರ ರಾಜೀನಾಮೆ ಪತ್ರ ಪರಿಶೀಲಿಸಿದ ರಮೇಶ್ ಕುಮಾರ್, 8 ಮಂದಿ ಶಾಸಕರ ರಾಜೀನಾಮೆ ಪತ್ರ ಅನೂರ್ಜಿತಗೊಳಿಸಿದ್ದಾರೆ. ಉಳಿದ 5 ರಾಜೀನಾಮೆ ಪತ್ರ ಮಾತ್ರ ಸ್ವೀಕರಿಸಿದ್ದಾರೆ.
ಯಾರ ರಾಜೀನಾಮೆ ಸ್ವೀಕೃತ..?
1. ರಾಮಲಿಂಗಾ ರೆಡ್ಡಿ
2. ಆನಂದ್ ಸಿಂಗ್
3. ಪ್ರತಾಪಗೌಡ ಪಾಟೀಲ್
4. ಗೋಪಾಲಯ್ಯ
5. ನಾರಾಯಣ ಗೌಡ
ಕಾಂಗ್ರೆಸ್ನ ರಾಮಲಿಂಗಾ ರೆಡ್ಡಿ, ಆನಂದ್ ಸಿಂಗ್, ಪ್ರತಾಪಗೌಡ ಪಾಟೀಲ್ ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ಸ್ವೀಕೃತಗೊಂಡಿವೆ. ಹಾಗೆಯೇ, ಜೆಡಿಎಸ್ನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಮತ್ತು ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರ ರಾಜೀನಾಮೆ ಪತ್ರಗಳನ್ನ ಸ್ಪೀಕರ್ ರಮೇಶ್ ಕುಮಾರ್ ಸ್ವೀಕೃತ ಮಾಡಿದ್ದಾರೆ.
ಯಾವ ರಾಜೀನಾಮೆ ತಿರಸ್ಕೃತ..?
1. ರಮೇಶ್ ಜಾರಕಿಹೊಳಿ
2. ಬಿ.ಸಿ.ಪಾಟೀಲ್
3. ಭೈರತಿ ಬಸವರಾಜ್
4. ಎಸ್.ಟಿ.ಸೋಮಶೇಖರ್
5. ಮಹೇಶ್ ಕುಮಟಳ್ಳಿ
6. ಮುನಿರತ್ನ
7. ಶಿವರಾಮ್ ಹೆಬ್ಬಾರ್
8. ಎಚ್.ವಿಶ್ವನಾಥ್
8 ಮಂದಿ ಶಾಸಕರಿಗೆ ಸ್ಪೀಕರ್ ತಿಳಿವಳಿಕೆ ನೋಟಿಸ್
ಕಾಂಗ್ರೆಸ್ನ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮಹೇಶ್ ಕುಮಟಳ್ಳಿ, ಮುನಿರತ್ನ, ಶಿವರಾಮ್ ಹೆಬ್ಬಾರ್, ಜೆಡಿಎಸ್ನ ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ಅನೂರ್ಜಿತಗೊಂಡಿವೆ.
ನಾಮಪತ್ರ ಸ್ವೀಕೃತಗೊಂಡಿರುವ ಆನಂದ್ ಸಿಂಗ್, ನಾರಾಯಣಗೌಡ, ಪ್ರತಾಪ್ ಗೌಡ ಅವರಿಗೆ ಶುಕ್ರವಾರ ತಮ್ಮ ಮುಂದೆ ಹಾಜರಾಗಲು ಸ್ವೀಕರ್ ನೋಟಿಸ್ ಕಳುಹಿಸಿದ್ದಾರೆ. ಹಾಗೆಯೇ, ರಾಮಲಿಂಗಾರೆಡ್ಡಿ ಮತ್ತು ಗೋಪಾಲಯ್ಯ ಅವರಿಗೆ ಇದೇ 15ರಂದು ಹಾಜರಾಗಲು ನೋಟಿಸ್ ನೀಡಿದ್ದಾರೆ. ರಾಜೀನಾಮೆ ಕ್ರಮಬದ್ಧವಾಗಿ ಸಲ್ಲಿಸದ ಶಾಸಕರಿಗೆ ತಿಳಿವಳಿಕೆ ನೋಟಿಸ್ ನೀಡಿದ್ದು, ಮತ್ತೆ ಇಚ್ಚಿಸಿದ್ದಲಿ ಇದೇ 12ರಂದು ಖುದ್ದು ಹಾಜರಾಗುವ ಮೂಲಕ ಕ್ರಮಬದ್ಧವಾಗಿ ರಾಜೀನಾಮೆ ಪತ್ರ ಸಲ್ಲಿಸಬಹುದು ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ.
ಈ ಎಲ್ಲ ಬೆಳವಣಿಗೆ ಮಧ್ಯೆ, ರಾಜ್ಯಪಾಲರು ಮಧ್ಯಪ್ರವೇಶಿಸಿದ್ದು, ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಶಾಸಕರು ನನ್ನನ್ನು ಭೇಟಿಯಾಗಿ ರಾಜೀನಾಮೆ ನೀಡಿದ್ದಾರೆ. ನೀವು ತ್ವರಿತವಾಗಿ ಸಂವಿಧಾನಬದ್ಧವಾಗಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಇದಕ್ಕೆ ಸ್ಪೀಕರ್ ರಮೇಶ್ ಕುಮಾರ್, ಯಾವ ಶಾಸಕರೂ ನನ್ನನ್ನು ಭೇಟಿಯಾಗಿಲ್ಲ. ಭೇಟಿಯಾದ ಬಳಿಕ ಸಂವಿಧಾನಬದ್ಧವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
Comments are closed.