ಕರ್ನಾಟಕ

ಕುಮಾರಸ್ವಾಮಿ ನಾಳೆ ರಾಜೀನಾಮೆ?

Pinterest LinkedIn Tumblr


ಬೆಂಗಳೂರು(ಜುಲೈ 10): ಸಾಲುಸಾಲಾಗಿ ಶಾಸಕರು ರಾಜೀನಾಮೆ ನೀಡುತ್ತಿರುವಂತೆಯೇ ಸರ್ಕಾರ ಉಳಿಸಿಕೊಳ್ಳುವ ಮೈತ್ರಿಪಕ್ಷಗಳ ಪ್ರಯತ್ನ ಕ್ಷಣಕ್ಷಣವೂ ಕ್ಷೀಣಿಸುತ್ತಾ ಹೋಗಿದೆ. ಅತ್ತ ಡಿಕೆ ಶಿವಕುಮಾರ್ ಅವರು ಮುಂಬೈಗೆ ಹೋಗಿ ಬರಿಗೈಲಿ ವಾಪಸ್ಸಾಗುತ್ತಿದ್ದಾರೆ. ಇತ್ತ, ಒಬ್ಬರಾದ ಮೇಲೆ ಒಬ್ಬ ಶಾಸಕರು ರಾಜೀನಾಮೆ ಕೊಡಲು ಮುಂದಾಗುತ್ತಿದ್ಧಾರೆ. ಸ್ಪೀಕರ್ ಅವರಿಂದಲೂ ಸರಕಾರ ಉಳಿಸಿಕೊಳ್ಳಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ. ದಿಕ್ಕುತೋಚದ ಕುಮಾರಸ್ವಾಮಿ ಅವರು ಮೌನಕ್ಕೆ ಶರಣಾಗಿದ್ದಾರೆ. ಮೂಲಗಳ ಪ್ರಕಾರ ಹೆಚ್​ಡಿಕೆ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ಧಾರೆ. ಶುಕ್ರವಾರ ಸದನದಲ್ಲಿ ಕುಮಾರಸ್ವಾಮಿ ಅವರು ವಿದಾಯ ಭಾಷಣ ಮಾಡಲಿದ್ದಾರೆನ್ನಲಾಗಿದೆ.

ಮೈತ್ರಿಪಕ್ಷಗಳ ಶಾಸಕರ ನಡೆಯಿಂದ ಬೇಸರಗೊಂಡ ಕುಮಾರಸ್ವಾಮಿ ಇವತ್ತು ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನೆಯ ಜಾಗಕ್ಕೂ ಹೋಗಲಿಲ್ಲ. ಕಾಂಗ್ರೆಸ್ ನಾಯಕರ ಜೊತೆಗೂ ಮಾತನಾಡಲಿಲ್ಲ. ಸ್ವಲ್ಪ ಹೊತ್ತು ಗೃಹ ಕಚೇರಿ ಕೃಷ್ಣಾದಲ್ಲಿದ್ದ ಅವರು ಅಲ್ಲಿಂದ ಹೊರ ನಡೆದರು. ತಮ್ಮ ಬೆಂಗಾವಲು ವಾಹನಗಳನ್ನು ಬಿಟ್ಟು ಅಜ್ಞಾತ ಸ್ಥಳಕ್ಕೆ ಕುಮಾರಸ್ವಾಮಿ ಹೋಗಿದ್ದಾರೆ.

ಇಡೀ 13 ಶಾಸಕರು ಒಟ್ಟೊಟ್ಟಿಗೆ ರಾಜೀನಾಮೆ ಕೊಟ್ಟಾಗಲೇ ಕುಮಾರಸ್ವಾಮಿ ಅವರು ರಾಜೀನಾಮೆ ಕೊಡಲು ಮುಂದಾಗಿದ್ದರಂತೆ. ಆದರೆ, ಕಾಂಗ್ರೆಸ್ ಪಕ್ಷದವರು ಇದನ್ನು ತಡೆದು, ತಾವು ಶಾಸಕರ ಮನವೊಲಿಸುತ್ತೇವೆಂದು ಭರವಸೆ ನೀಡಿ ಸುಮ್ಮನಾಗಿಸಿದ್ದರಂತೆ. ಈಗ ಇನ್ನಷ್ಟು ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಸರಕಾರ ಉಳಿಯುವುದು ಅಸಾಧ್ಯವೆಂಬ ಸ್ಥಿತಿ ತಲುಪಿದೆ. ಹೀಗಾಗಿ ಕುಮಾರಸ್ವಾಮಿ ರಾಜೀನಾಮೆ ನೀಡಲು ಗಟ್ಟಿ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ.

ಇದೇ ವೇಳೆ, ಪತ್ರಿಕಾ ಪ್ರತಿಭಟನೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ ಅವರು ಬಿಜೆಪಿಯಿಂದ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವದ ಎಲ್ಲಾ ಎಲ್ಲೆಗಳನ್ನೂ ಬಿಜೆಪಿ ಮೀರಿದೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ಜನಪ್ರತಿನಿಧಿಗಳನ್ನು ಬೀದಿಗೆ ನಿಲ್ಲಿಸಿದೆ. ಶಾಸಕರನ್ನು ಗೃಹಬಂಧನದಲ್ಲಿರಿಸಿ ನೆರೆ ರಾಜ್ಯವನ್ನು ಅತಂತ್ರ ಸ್ಥಿತಿಗೆ ದೂಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ಧಾರೆ.

ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧವೂ ಕಿಡಿಕಾರಿದ್ದಾರೆ. ಅಮೆರಿಕಾದಿಂದ ಬಂದ ಕೂಡಲೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, ಸರ್ಕಾರ ಉಳಿಸಿಕೊಳ್ಳುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಈಗ ನನಗೆ ಅಪಮಾನ ಮಾಡಲೆಂದೇ ಕಾಂಗ್ರೆಸ್ ಪಿತೂರಿ ಮಾಡಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

Comments are closed.