ಕರ್ನಾಟಕ

ಮೊಬೈಲ್‌ ಸ್ಫೋಟಕ್ಕೆ ಬಿಜೆಪಿ ಮುಖಂಡ ಬಲಿ

Pinterest LinkedIn Tumblr


ಬಂಗಾರಪೇಟೆ: ಮೊಬೈಲ್‌ ಬ್ಯಾಟರಿ ಸ್ಫೋಟಗೊಂಡು ವ್ಯಾಪಿಸಿದ ಬೆಂಕಿ ಅನಾಹುತಕ್ಕೆ ಬಿಜೆಪಿ ಮುಖಂಡ ಟಿ.ಎಸ್‌. ನಾಗಪ್ರಕಾಶ್‌(58) ಸ್ಥಳದಲ್ಲಿಯೇ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ತಂದೆ, ಪತ್ನಿ, ಮಗ ಹಾಗೂ ಸೊಸೆ ತೀವ್ರ ಅಸ್ವಸ್ಥಗೊಂಡು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಟ್ಟಣದ ಬಜಾರ್‌ ರಸ್ತೆಯಲ್ಲಿರುವ ನಿವಾಸದಲ್ಲಿ ಮಲಗುವ ಕೋಣೆಯಲ್ಲಿ ಮೊಬೈಲ್‌ಗೆ ಛಾರ್ಜರ್‌ ಹಾಕಿ ಮಲಗಿದ್ದ ನಾಗಪ್ರಕಾಶ್‌ ಶನಿವಾರ ತಡರಾತ್ರಿ ಮೊಬೈಲ್‌ಗೆ ಬಂದ ಮೆಸೇಜ್‌ ನೋಡಲು ಪಿನ್‌ ತೆಗೆಯದೇ ಮೊಬೈಲ್‌ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹಾಸಿಗೆಗೆ ವ್ಯಾಪಿಸಿದೆ. ಇದರಿಂದ ಹೊಗೆ ಎದ್ದಿದೆ. ಜತೆಗೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮೆಣಿಸಿನಕಾಯಿ ಚೀಲಗಳಿಗೂ ವ್ಯಾಪಿಸಿ ಅದರ ಘಾಟಿನಿಂದ ಹೊರಬರಲಾಗದೇ ನಾಗಪ್ರಕಾಶ್‌ ಶೇ. 60 ಸುಟ್ಟುಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪತ್ನಿ ಶೋಭಾ ತೀವ್ರ ಅಸ್ವಸ್ಥಗೊಂಡು ಕಿರುಚಾಡಿದ್ದಾರೆ. ಮನೆಯಲ್ಲಿಯೇ ಮಲಗಿದ್ದ ತಂದೆ ಸತ್ಯನಾರಾಯಣ, ಮಗ ಸ್ವರೂಪ್‌ ಹಾಗೂ ಸೊಸೆ, ನಾಗಪ್ರಕಾಶ್‌ ಹಾಗೂ ಅವರ ಪತ್ನಿಯನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಹೊಗೆ ಹಾಗೂ ಮೆಣಿಸಿನಕಾಯಿ ಘಾಟಿಗೆ ತೀವ್ರ ಅಸ್ವಸ್ಥಗೊಂಡು ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮನೆಯಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

Comments are closed.