ಕರ್ನಾಟಕ

ಸೋಲಿನ ಬಳಿಕ ಮೊದಲ ಬಾರಿಗೆ ದೇವೇಗೌಡ ದೆಹಲಿಗೆ: ಮಾಸ್ಟರ್ ಪ್ಲಾನ್ ಏನು..?

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಮೊದಲ ಬಾರಿಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ದೆಹಲಿಗೆ ತೆರಳಿದ್ದಾರೆ. ಫಲಿತಾಂಶ ಹೊರಬಿದ್ದ ಬಳಿಕ ದೆಹಲಿಯತ್ತ ಮುಖ ಮಾಡದೇ ಇದ್ದ ದೇವೇಗೌಡರು ಇದೀಗ ದಿಢೀರನೆ ದೆಹಲಿಗೆ ತೆರಳಿರುವುದು ಕುತೂಹಲ ಕರವಾಗಿದೆ. ಶುಕ್ರವಾರವಷ್ಟೇ ನಡೆದ ಪಕ್ಷದ ಸಮಾರಂಭದಲ್ಲಿ ಮಾತನಾಡಿದ್ದ ದೇವೇಗೌಡರು ಸೋಲಿನಿಂದಾಗಿ ತಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ.

ಪಕ್ಷ ಮತ್ತು ಸರ್ಕಾರ ಉಳಿಸಿಕೊಳ್ಳಲು ಶ್ರಮಿಸುವೆ ಎಂಬ ಮಾತನ್ನು ಹೇಳಿದ್ದರು. ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ಅವರು ಸೋಮವಾರ ಸಂಜೆ ವಾಪಸಾಗುವ ಸಾಧ್ಯತೆಯಿದ್ದು, ಕಾಂಗ್ರೆಸ್ ನಾಯಕ ರಾದ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಭೇಟಿಯ ವೇಳೆ ರಾಜ್ಯ ರಾಜಕಾರಣದಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆಯೂ ಪ್ರಸ್ತಾಪವಾಗ ಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಸುಭದ್ರಗೊಳಿಸುವ ಕುರಿತು ತಂತ್ರ ರೂಪಿಸುವ ನಿರೀಕ್ಷೆಯಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದಿದ್ದು, ಇದುವರೆಗೂ ಸ್ಥಿರತೆಯ ಭಾವನೆ ಬಂದಿಲ್ಲ. ಹೀಗಾಗಿ, ಸರ್ಕಾರ ಗಟ್ಟಿಗೊಳಿಸುವ ಸಂಬಂಧ ದೀರ್ಘಕಾಲೀನ ಪರಿಹಾರೋಪಾಯ ಹುಡುಕಬಹುದು ಎನ್ನಲಾಗುತ್ತಿದೆ.

ಇದೇ ಬುಧವಾರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಜೆಡಿಎಸ್‌ನಿಂದ ಎರಡು ಮತ್ತು ಕಾಂಗ್ರೆಸ್‌ನಿಂದ ಒಂದು ಸ್ಥಾನ ಖಾಲಿ ಉಳಿದಿವೆ. ಈ ಪೈಕಿ ಜೆಡಿಎಸ್‌ನಿಂದ ಒಂದು ಸ್ಥಾನ ಮತ್ತು ಕಾಂಗ್ರೆಸ್‌ನ ಒಂದು ಸ್ಥಾನವನ್ನು ಇಬ್ಬರು ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ಎನ್.ನಾಗೇಶ್ ಅವರಿಗೆ ನೀಡುವ ಸಾಧ್ಯತೆಯಿದೆ. ಜೆಡಿಎಸ್ ಪಾಲಿನ ಉಳಿಯುವ ಇನ್ನೂ ಒಂದು ಸ್ಥಾನವನ್ನು ಏನು ಮಾಡಬೇಕು ಎಂಬುದರ ಬಗ್ಗೆಯೂ ಉಭಯ ಪಕ್ಷಗಳ ವರಿಷ್ಠರ ಭೇಟಿ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

Comments are closed.