ಬೆಂಗಳೂರು: ಪ್ರತಿಷ್ಠಿತ ಆ್ಯಪಲ್ ಸಂಸ್ಥೆ ಬೆಂಗಳೂರಿನ ಯುವಕನೋರ್ವನಿಗೆ ಬರೋಬ್ಬರಿ 1,07,500 ರೂ. ಪಾವತಿಸಬೇಕಾಗಿದೆ!
ಅರೆ ಇದೇನಿದು ಸಂಗತಿ ಎನ್ನುತ್ತೀರಾ …
ಹೊಸದಾಗಿ ಖರೀದಿಸಿದ ಐಫೋನ್ ಎಕ್ಸ್‌ನಲ್ಲಿ ದೋಷ ಕಂಡಿದ್ದು, ಇದನ್ನು ಸರಿಪಡಿಸಲು ಅಥವಾ ವಾಪಸ್ ಪಡೆದುಕೊಳ್ಳಲು ಆ್ಯಪಲ್ ಸಂಸ್ಥೆ ನಿರಾಕರಿಸಿದೆ. ಇದಕ್ಕೆ ಗ್ರಾಹಕ ನ್ಯಾಯಾಲಯದ ಮೊರೆ ಹೋದ ಬೆಂಗಳೂರು ಯುವಕನಿಗೆ ನ್ಯಾಯ ಒದಗಿದೆ.
ಯುವಕ ಖರೀದಿಸಿದ ದೋಷಪೂರಿತ ಐಫೋನ್ ಎಕ್ಸ್ ಫೋನ್‌ನ್ನು ವಾಪಸ್ ಪಡೆದುಕೊಂಡು, ಐದು ಸಾವಿರ ರೂ. ಯುವಕನ ನ್ಯಾಯಾಲಯದ ಖರ್ಚು ವೆಚ್ಚ ಹಾಗೂ ಮತ್ತೆ ಐದು ಸಾವಿರ ರೂ. ಯುವಕನ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಕ್ಕಾಗಿ ದಂಡವಾಗಿ ಪಾವತಿ ಮಾಡುವಂತೆ ಆ್ಯಪಲ್ ಸಂಸ್ಥೆಗೆ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ. ಒಟ್ಟಾರೆ 1,07,500 ರೂ.ಗಳನ್ನು 60 ದಿನದ ಒಳಗಾಗಿ ಪಾವತಿಸುವಂತೆ ಸೂಚಿಸಿದೆ.
ಮೇ 15ಕ್ಕೆ ಗ್ರಾಹಕ ನ್ಯಾಯಾಲಯ ಪ್ರಕರಣ ಸಂಬಂಧ ತೀರ್ಪು ನೀಡಿದೆ.
2018ರ ಆರಂಭದಲ್ಲಿ ದೊಡ್ಡಬೊಮ್ಮಸಂಧ್ರ ಭಾಗದ ನಿವಾಸಿ ದೀಪಕ್ ಕುಮಾರ್ (25) ಹೊಸ ಐಫೋನ್ ಎಕ್ 64GB ಫೋನ್‌ನನ್ನು ತಿಮ್ಮ ಸಂಧ್ರ ಮುಖ್ಯರಸ್ತೆಯಲ್ಲಿರುವ ಐ ಸೆಂಟರ್‌ನಿಂದ 97,500ರೂ. ಗೆ ಖರೀದಿಸಿದ್ದರು. ಅದೇ ವರ್ಷ ಆಗಸ್ಟ್ ವೇಳೆಗೆ ಫೋನ್‌ನ ಸ್ಪೀಕರ್‌ನಲ್ಲಿ ದೋಷವಿರುವುದು ಗಮನಿಸಿದ್ದಾರೆ.
ಈ ಸಂಬಂಧ ಸರ್ವೀಸ್ ಸೆಂಟರ್‌ಗೆ ಫೋನ್ ನೀಡಿ, ದೂರು ದಾಖಲಿಸಿದ್ದ ದೀಪಕ್ ಕುಮಾರ್‌ಗಗೆ ಆಗಸ್ಟ್ 6ರಂದು ಆ್ಯಪಲ್ ಸಂಸ್ಥೆಯಿಂದ, ಹಾನಿಗೊಳಗಾದ ಸ್ಪೀಕರ್ ತೆಗೆದು ಹೊಸ ಭಾಗವನ್ನು ಅಳವಡಿಸಲಾಗುವುದು ಎಂದು ಇಮೇಲ್ ಬಂದಿದೆ. ಐದು ದಿನಗಳ ಬಳಿಕ, ಮತ್ತೊಂದು ಇ-ಮೇಲ್ ಬಂದಿದ್ದು, ಇದರಲ್ಲಿ, ಫೋನ್ ಭಾಗವು ಅನ್‌ಡಾಕ್ಯುಮೆಂಟೆಡ್ ಡ್ಯಾಮೇಜ್ ಎಂದು ಪರಿಗಣಿಸಲಾಗಿದ್ದು, ಇದನ್ನು ಯಾವುದೇ ರೀತಿಯ ವಾರೆಂಟಿಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಸರ್ವೀಸ್ ಸೆಂಟರ್ ಹಾಗೂ ಆ್ಯಪಲ್ ಸಂಸ್ಥೆಯ ಗ್ರಾಹಕ ಕೇಂದ್ರವನ್ನು ಸಾಕಷ್ಟು ಬಾರಿ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಸೆ.24ರಂದು ದೀಪಕ್ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಈ ಸಂಬಂಧ ಅಗತ್ಯ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಆ್ಯಪಲ್ ಇಂಡಿಯಾ ಸಂಸ್ಥೆಯ ವರ್ತನೆಯನ್ನು ಕಟುವಾಗಿ ಖಂಡಿಸಿ, ತೀರ್ಪು ನೀಡಿದ್ದಾರೆ.