ಕರ್ನಾಟಕ

ಅಣ್ಣಾಮಲೈ ಪೊಲೀಸ್​ ಸೇವೆ ಇಂದಿಗೆ ಅಂತ್ಯ

Pinterest LinkedIn Tumblr


ಬೆಂಗಳೂರು: ಅಪರಾಧಿಗಳಿಗೆ ನಡುಕ ಹುಟ್ಟಿಸಿದ್ದ ಹಾಗೂ ಕರ್ನಾಟಕ ಸಿಂಗಂ ಎಂದೇ ಖ್ಯಾತರಾಗಿರುವ ಐಪಿಎಸ್​​ ಅಧಿಕಾರಿ ಅಣ್ಣಾಮಲೈ ಅವರ ರಾಜೀನಾಮೆಯನ್ನು ಇಂದು(ಸೋಮವಾರ) ಅಧಿಕೃತವಾಗಿ ಅಂಗೀಕಾರ ಮಾಡಲಾಗಿದೆ. ಇವತ್ತು ಅವರು ಪೊಲೀಸ್ ಸೇವೆಯಿಂದ ಅಧಿಕೃತವಾಗಿ ವಿಯುಕ್ತಗೊಂಡಿದ್ದಾರೆ. ಅಣ್ಣಾಮಲೈ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರೋಹಿಣಿ ಕಟೋಚ್ ಸೆಪಟ್‌ ಅವರು ಕೆ.ಅಣ್ಣಾಮಲೈ ಜಾಗಕ್ಕೆ ಬಂದಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದೆ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಕಳೆದ ತಿಂಗಳು ಮೇ 28ಕ್ಕೆ ಭಾರತೀಯ ಪೊಲೀಸ್ ಸೇವೆಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದರು. ಪತ್ರ ವ್ಯವಹಾರ ಎಲ್ಲಾ ಪ್ರಕ್ರಿಯೆಗಳಿಗೂ ಕೆಲ ಕಾಲ ಸಮಯ ತೆಗೆದುಕೊಂಡಿದ್ದ ಸರ್ಕಾರ ಇಂದು ರಾಜೀನಾಮೆ ಅಂಗೀಕಾರ ಮಾಡಿದೆ.

ಈ ಕುರಿತಂತೆ  ಮಾತಾಡಿದ್ದ ಖಡಕ್​​ ಅಧಿಕಾರಿ ಕೆ. ಅಣ್ಣಾಮಲೈ ಅವರು, ನಾನು ಇಂದು ಕೆಲಸದಿಂದ ಸಂಪೂರ್ಣ ಬಿಡುಗಡೆ ಹೊಂದಿದ್ದೇನೆ. ನನ್ನ ಪೊಲೀಸ್​ ಪಯಾಣದಲ್ಲಿ ಜೊತೆಗೂಡಿದ ಎಲ್ಲರಿಗೂ ಚಿರಋಣಿ ಎಂದು ತಿಳಿಸಿದ್ದಾರೆ.

ಈ ಹಿಂದೆಯೇ ರಾಜೀನಾಮೆ ನೀಡುವ ಮುನ್ನ ಅಣ್ಣಾಮಲೈ ಅವರು, ಕಳೆದ 6 ತಿಂಗಳಿನಿಂದಲೂ ನಾನು ಈ ಆಲೋಚನೆಯಲ್ಲಿದ್ದೆ. ಐಪಿಎಸ್​​ಗೆ ಆಯ್ಕೆಯಾಗಿ 9 ವರ್ಷಗಳೇ ಆಗಿವೆ. ನಾನು ಆ 9 ವರ್ಷಗಳ ಪ್ರತಿಯೊಂದು ಕ್ಷಣದಲ್ಲೂ ಖಾಕಿ ಜೊತೆಯಲ್ಲೇ ಬದುಕಿದೆ. ಪೊಲೀಸ್ ಕೆಲಸಕ್ಕಿಂತ ಸರಿ ಸಮನಾದ ಮತ್ತೊಂದು ಕೆಲಸ ಇಲ್ಲ ಎಂದು ನಂಬಿದವನು ನಾನು. ಇದನ್ನ ನನ್ನ ಎಷ್ಟೋ ಮಂದಿ ಜೊತೆಗಾರರೊಂದಿಗೂ ಹಂಚಿಕೊಂಡಿದ್ದೇನೆ ಎಂದಿದ್ದರು.

ಹಾಗೆಯೇ ನನ್ನ ಪ್ರಕಾರ ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಕೆಲಸ. ಜೊತೆಗೆ ಹೆಚ್ಚು ಜವಾಬ್ಧಾರಿಯುತ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಇದರ ಜೊತೆಗೆ ಸಾಕಷ್ಟು ವಯುಕ್ತಿಕ ಸಭೆ, ಸಮಾರಂಭ, ಕುಟುಂಬದ ಕೆಲಸ ಕಾರ್ಯಗಳನ್ನೂ ಕಳೆದುಕೊಂಡಿದ್ದೇನೆ. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯೋಕೆ ಸಹಕರಿಸಿದ ಹಲವರಿಗೆ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ಇದು ನನ್ನನ್ನ ಆಗ್ಗಾಗ್ಗೆ ಚಿಂತನೆಗೆ ಈಡು ಮಾಡಿದ್ದು ಸುಳ್ಳಲ್ಲ ಎಂದು ಹೇಳಿದ್ದರು.

ಹೀಗೆ ಮಾತು ಮುಂದುವರೆಸಿದ್ದ ಅವರು, ಬದುಕಿನ ಎಲ್ಲಾ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. ನನ್ನ ಖಾಕಿ ಬದುಕಿನ ಕೆಲಸ ಮುಗಿದಿದೆ. ಹಾಗಂತ ನಾನು ನಿರ್ಧರಿಸಿದ್ದೇನೆ. ನಾನು ಲೋಕಸಭಾ ಚುನಾವಣೆಗೆ ಮೊದಲೇ ಈ ಬಗ್ಗೆ ನಿರ್ಧರಿಸಿದ್ದೆ. ಆದರೆ ಚುನಾವಣಾ ಸಮಯದಲ್ಲಿ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹಿಂದೆ ಸರಿಯಲು ಮನಸ್ಸು ಒಪ್ಪಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಯಾರಿಗಾದ್ರೂ ಯಾವುದಾದ್ರೂ ತೊಂದರೆ ಅಥವಾ ಮನಃಸ್ತಾಪಗಳಿದ್ದರೆ ಅಂಥವರ ಬಳಿ ಕ್ಷಮೆ ಕೇಳುತ್ತೇನೆ. ಇದೀಗ ಅಧಿಕೃತವಾಗಿ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದರು.

Comments are closed.