
ಹಾಸನ; ಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಾಸನದ ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇಂದು ದೂರು ನೀಡಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿಗೆ ದೂರು ನೀಡಿರುವ ಅವರು, “ಲೋಕೋಪಯೋಗಿ ಇಲಾಖೆಯ ವತಿಯಿಂದ ಹಾಸನದಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳು ಕಳಪೆಯಾಗಿವೆ. ಹಳೆ ಕಾಮಗಾರಿಗಳನ್ನು ತೋರಿಸಿ ಹೊಸ ಬಿಲ್ ಮಾಡಿ ಕೋಟ್ಯಾಂತರ ಹಣ ಲೂಟಿ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಈ ಹಿಂದೆಯೂ ಅನೇಕ ಬಾರಿ ಇಂತಹ ಆರೋಪಗಳು ಕೇಳಿಬಂದಿದ್ದವು. ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾತು ಪದೆ ಪದೆ ಕೇಳಿಬರುತ್ತಿದೆ. ಅಲ್ಲದೆ ರೇವಣ್ಣ ಅನಾವಶ್ಯಕವಾಗಿ ಇತರರ ಖಾತೆಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ, ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂದು ಅನೇಕ ಸಚಿವರು ಆರೋಪಿಸಿದ್ದರು.
ಇದೀಗ ಹಾಸನದ ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಈ ಕುರಿತ ಸಿಎಂ ಕುಮಾರಸ್ವಾಮಿಗೆ ನೇರಾನೇರ ದೂರು ನೀಡಿದ್ದಾರೆ. ಆದರೆ, ಈ ದೂರಿಗೆ ಮನ್ನಣೆ ಸಿಗುತ್ತದೆಯೇ? ನಿಜವಾಗಿಯೂ ಕುಮಾರಸ್ವಾಮಿ ಈ ದೂರನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ? ತನ್ನ ಸಹೋದರ ರೇವಣ್ಣ ವಿರುದ್ಧ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗ್ತಾರ? ಎಂಬುದು ಯಕ್ಷಪ್ರಶ್ನೆಯೇ ಸರಿ.
Comments are closed.