ಕರ್ನಾಟಕ

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಆರಂಭದಲ್ಲೇ ವಿಘ್ನ!

Pinterest LinkedIn Tumblr


ದೋಸ್ತಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೊನ್ನೆಯಷ್ಟೇ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ಜಿ.ಎ.ಬಾವಾ ಅವರನ್ನು ನೇಮಕ ಮಾಡಿದ್ದ ಸರ್ಕಾರ ಇದೀಗ ಬಾವಾಗೆ ಅಧಿಕಾರ ಸ್ವೀಕರಿಸದಂತೆ ಸೂಚನೆ ನೀಡಿದೆ. ಇದಕ್ಕೆ ಮೈತ್ರಿಯಲ್ಲಿ ಒಮ್ಮತ ಮೂಡದಿರುವುದೇ ಕಾರಣ ಎನ್ನಲಾಗುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಅವರನ್ನು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಇಂದು ಜಿ.ಎ.ಬಾವಾ ಆಯೋಗದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ ಅಧಿಕಾರ ಸ್ವೀಕರಿಸುವ ಕ್ಷಣದಲ್ಲಿ ಬಾವಾ ಸರ್ಕಾರ ಅಧಿಕಾರ ಸ್ವೀಕರಿಸದಂತೆ ಸೂಚನೆ ನೀಡಿದ್ದು, ಕಾಂಗ್ರೆಸ್​ ಪಾಳಯದಲ್ಲಿ ಅಕ್ರೋಶ ಭುಗಿಲೆದ್ದಿದೆ.

ಕಾಂಗ್ರೆಸ್​ ಮೂಲನಿವಾಸಿಗರು ಮತ್ತು ವಲಸಿಗರ ನಡುವಿನ ಕದನದಿಂದ ಬಾವಾಗೆ ಅಧಿಕಾರ ತಪ್ಪಿದೆ ಎನ್ನಲಾಗುತ್ತಿದೆ. ಇನ್ನು ಬಾವಾ ಅಧಿಕಾರ ಸ್ವೀಕಾರ ತಡೆಹಿಡಿದಿರುವುದರ ಹಿಂದೆ ಸಚಿವ ಜಮೀರ್ ಅಹ್ಮದ್ ಕೈವಾಡ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದ ವರ್ತನೆ ಕಾಂಗ್ರೆಸ್​ ಕಣ್ಣುಕೆಂಪಗಾಗಿಸಿದ್ದು, ಈ ವಿವಾದ ಯಾವ ಹಂತ ತಲುಪಲಿದೆ ಕಾದುನೋಡಬೇಕಿದೆ.

Comments are closed.