ಕರ್ನಾಟಕ

ಯಡಿಯೂರಪ್ಪ ಮುಖ್ಯಮಂತ್ರಿ ಕನಸಿಗೆ ಹೈಕಮಾಂಡ್ ಕತ್ತರಿ?

Pinterest LinkedIn Tumblr


ಬೆಂಗಳೂರು: ಕೇಂದ್ರದಲ್ಲಿ ಎರಡನೇ ಅವಧಿಗೆ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಆಪರೇಷನ್ ಕಮಲ ಎಗ್ಗಿಲ್ಲದೇ ನಡೆದು ಕೆಲವೇ ದಿನಗಳಲ್ಲಿ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದಾರೆ. ಆದರೆ, ವಾಸ್ತವದಲ್ಲಿ ಆಪರೇಷನ್ ಕಮಲ ನಡೆಯುವುದು ಅನುಮಾನಾಸ್ಪದವಾಗಿದೆ. ಮೈತ್ರಿ ಸರ್ಕಾರ ಬೀಳಿಸಿ ಮತ್ತೊಮ್ಮೆ ಸಿಎಂ ಆಗಲು ಅವಿರತವಾಗಿ ಶ್ರಮಿಸುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರ ನಾಗಾಲೋಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಆಪರೇಷನ್ ಕಮಲ ನಡೆಸಬೇಡಿ ಎಂದು ದೆಹಲಿಯಲ್ಲಿ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿ ಕಳುಹಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಆರೆಸ್ಸೆಸ್ ಕಟ್ಟಾಳು ಬಿ.ಎಲ್. ಸಂತೋಷ್ ಅವರು ಬಿಎಸ್​ವೈಗಿಂತ ಹೆಚ್ಚು ಪ್ರಾಬಲ್ಯ ಗಳಿಸುತ್ತಿದ್ಧಾರೆ. ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದಿಂದ ಸ್ಥಾನ ಪಡೆದವರ ಪಟ್ಟಿಯಲ್ಲೇ ಇದರ ಸುಳಿವು ಇದೆ. ಯಡಿಯೂರಪ್ಪ ಅವರು ಶಿಫಾರಸು ಮಾಡಿದರೆನ್ನಲಾದ ಮೂವರ ಪೈಕಿ ಒಬ್ಬರಿಗೂ ಸಂಪುಟ ಭಾಗ್ಯ ಸಿಕ್ಕಿಲ್ಲ. ಶೋಭಾ ಕರಂದ್ಲಾಜೆ, ಸಿ.ಎಂ. ಉದಾಸಿ ಮತ್ತು ಉಮೇಶ್ ಜಾಧವ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ, ಈ ವಿಚಾರದಲ್ಲಿ ಬಿ.ಎಲ್. ಸಂತೋಷ್ ಅವರ ಮಾತೇ ನಡೆದಿದೆ. ಶೋಭಾ ಕರಂದ್ಲಾಜೆ ಬದಲು ಸದಾನಂದ ಗೌಡರಿಗೆ ಸ್ಥಾನ ಕೊಡಲಾಗಿದೆ. ಬಿಎಲ್ ಸಂತೋಷ್ ಆಪ್ತರಾದ ಪ್ರಹ್ಲಾದ್ ಜೋಷಿ ಮತ್ತು ಸುರೇಶ್ ಅಂಗಡಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಇದು ಬಿಎಲ್ ಸಂತೋಷ್ ಅವರು ರಾಜ್ಯ ಬಿಜೆಪಿಯಲ್ಲಿ ಹಿಡಿತ ಸಾಧಿಸುತ್ತಿರುವ ದ್ಯೋತಕವಾಗಿದೆ.

ಯಡಿಯೂರಪ್ಪ ಅವರಿಗೂ ಈ ಬೆಳವಣಿಗೆ ಚಿಂತೆ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತನ್ನ ಮಹತ್ವ ಹೆಚ್ಚಿರುವುದಿಲ್ಲ. ಸಿಎಂ ಆದರೆ ಈಗಲೇ ಆಗಬೇಕು. ಮುಂದೆ ಅದು ಸಾಧ್ಯವಿಲ್ಲ ಎಂಬ ಅರಿವು ಅವರಿಗಿದೆ. ಹೀಗಾಗಿ, ಎನ್​ಡಿಎ ಪ್ರಚಂಡ ಬಹುಮತದಿಂದ ಗೆದ್ದ ಬಿಸಿಯಲ್ಲೇ ಆಪರೇಷನ್ ಕಮಲ ನಡೆಸಿ ಮೈತ್ರಿ ಸರ್ಕಾರ ಬೀಳಿಸುವುದು ಸುಲಭ ಎಂಬುದು ಬಿಎಸ್​ವೈ ಲೆಕ್ಕಾಚಾರವಾಗಿದೆ.

ಆದರೆ, ಬಿಎಸ್​ವೈ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ತಳ್ಳಿಹಾಕಿದೆ. ಮೈತ್ರಿ ಸರ್ಕಾರ ಪತನವಾಗುವುದು ಬೇಕು, ಆದರೆ, ಆಪರೇಷನ್ ಕಮಲ ಮಾಡಬಾರದು ಎಂದು ಹೈಕಮಾಂಡ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದೆ. ಅಂದರೆ, ಯಾವುದೇ ಕಾರಣಕ್ಕೂ ಶಾಸಕರನ್ನು ಖರೀದಿಸಬೇಡಿ, ಕುದುರೆ ವ್ಯಾಪಾರ ಮಾಡಬೇಡಿ. ಅತೃಪ್ತ ಶಾಸಕರು ಅವರಾಗೇ ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸೋಣ. ನಮ್ಮ ಸರ್ಕಾರ ರಚನೆಯಾದಾಗ ಅವರನ್ನು ಮಂತ್ರಿ ಮಾಡೋಣ. ಅವರ ಉಪಚುನಾವಣೆಯ ಜವಾಬ್ದಾರಿಯನ್ನೂ ನಾವು ವಹಿಸಿಕೊಳ್ಳೋಣ ಎಂದು ಯಡಿಯೂರಪ್ಪ ಅವರಿಗೆ ವರಿಷ್ಠರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಪಾರಾಗಬೇಕು. ಅದಕ್ಕೆ ಕಾಂಗ್ರೆಸ್ ಶಾಸಕರ ಮೂಗಿಗೆ ಜೇನುತುಪ್ಪ ಸವರುತ್ತಿದ್ದಾರೆ. ಸ್ವಲ್ಪ ದಿನವಾದ ಮೇಲೆ ಅವರು ತಮ್ಮ ಹಳೆಯ ವರಸೆ ತೋರಿಸುತ್ತಾರೆ. ಆಗ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತದೆ. ಅವರವರಲ್ಲೇ ಕಿತ್ತಾಡಿಕೊಂಡು ಸರ್ಕಾರ ಬೀಳುತ್ತದೆ. ಆ ಬಳಿಕ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತ ನಿಶ್ಚಿತ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.

ಯಡಿಯೂರಪ್ಪ ಅವರೇ ಖುದ್ದಾಗಿ ಇದನ್ನು ಸ್ಪಷ್ಟಪಡಿಸಿದ್ದಾರೆ. ತಾನು ಅಧಿಕಾರಕ್ಕೆ ಹಾತೊರೆಯುತ್ತಿಲ್ಲ. ಅದರ ಅಗತ್ಯವೂ ಇಲ್ಲ. ವಿಪಕ್ಷದಲ್ಲಿ ಕುಳಿತು ಕೆಲಸ ಮಾಡಲು ತಮಗೆ ಶಕ್ತಿ ಇದೆ ಎಂದು ಯಡಿಯೂರಪ್ಪ ತಮ್ಮ ವರಸೆ ಬದಲಿಸಿದ್ದಾರೆ. ಆದರೆ, ಚುನಾವಣೆ ನಡೆದು ಬಿಜೆಪಿ ಅಧಿಕಾರಕ್ಕೆ ಬಂದರೆ ತಾನು ಸಿಎಂ ಆಗುತ್ತೇನೆಂಬ ಗ್ಯಾರಂಟಿ ಯಡಿಯೂರಪ್ಪ ಅವರಿಗಿಲ್ಲ. ಸಿಎಂ ಆದರೆ ಈಗಲೇ ಆಗಬೇಕು ಎಂದುಕೊಂಡಿರುವ ಯಡಿಯೂರಪ್ಪ ಅವರು ಮೈತ್ರಿಪಾಳಯದಲ್ಲಿ ಅತೃಪ್ತರಿಂದ ಕ್ಷಿಪ್ರ ಕ್ರಾಂತಿ ಆಗಲೆಂದು ನಿರೀಕ್ಷಿಸುತ್ತಿದ್ದಾರೆ.

Comments are closed.