ಕರ್ನಾಟಕ

ಕುಂದಗೋಳ ಉಪ ಚುನಾವಣೆ: ಕಾಂಗ್ರೆಸ್​ಗೆ ಸೋಲಿನ ಭೀತಿ; ಕ್ಷೇತ್ರ ಬಿಟ್ಟು ಕದಲದ ಡಿಕೆಶಿ

Pinterest LinkedIn Tumblr


ಹುಬ್ಬಳ್ಳಿ: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರಿಗೆ ಕುಂದಗೋಳ ವಿಧಾನಸಭೆ ಉಪ ಚುನಾವಣೆ ಟ್ರಬಲ್ ನೀಡುತ್ತಿದೆ. ಪರಿಣಾಮ ಸಂಪುಟ ಸಭೆಗೂ ಹಾಜರಾಗದ ಅವರು ಗೆಲುವಿಗಾಗಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.

ಕುಂದಗೋಳ ಉಪ ಚುನಾವಣೆಯ ಗೆಲುವು ಕಾಂಗ್ರೆಸ್ ಪಾಲಿನ ಪ್ರತಿಷ್ಠೆಯ ಕಣವಾಗಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಸಿ.ಎಸ್. ಶಿವಳ್ಳಿ ಕೇವಲ 634 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಅಲ್ಲದೆ ಉಪ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಹ ಸಾಥ್ ನೀಡದಿರುವುದು ಕಾಂಗ್ರೆಸ್ ನಾಯಕರ ತಲೆ ನೋವಿಗೆ ಕಾರಣವಾಗಿದ್ದು, ಸೋಲಿನ ಭಯ ಕಾಡುತ್ತಿದೆ. ಇದೇ ಕಾರಣಕ್ಕೆ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಡಿಕೆಶಿ ಸಂಪುಟ ಸಭೆಗೂ ಹಾಜರಾಗದೆ ಗೆಲುವಿಗೆ ರಣತಂತ್ರ ಹೆಣೆಯಲು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.

ಕಾಂಗ್ರೆಸ್ ಒಳಬೇಗುದಿ ಶಮನಕ್ಕೆ ಸರ್ಜರಿ : ಮಾಜಿ ಸಚಿವ ದಿವಂಗತ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ಮರಣದಿಂದ ತೆರವಾದ ಕುಂದಗೋಳ ಕ್ಷೇತ್ರದ ಟಿಕೆಟ್​ಗಾಗಿ ಸ್ಥಳೀಯ ನಾಯಕ ಶಿವಾನಂದ ಬೆಂತೂರು ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮೃತ ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್​ ನೀಡಿ ಎಲ್ಲರಿಗೂ ಆಘಾತ ನೀಡಿತ್ತು. ಇದು ಸಾಮಾನ್ಯವಾಗಿ ಸ್ಥಳೀಯ ನಾಯಕರು ಹಾಗೂ ಟಿಕೆಟ್ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಪ್ರಚಾರದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಅವರು ಬಹಿರಂಗವಾಗಿಯೇ ಘೋಷಿಸಿದ್ದರು.

ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಸಂಪೂರ್ಣ ಸಹಕಾರ ಸಿಗದೆ ಸ್ವತಃ ಡಿ.ಕೆ. ಶಿವಕುಮಾರ್ ಹೈರಾಣಾಗಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಎಲ್ಲಾ ಹಂತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನೆಕ್​ ಟು ನೆಕ್ ಫೈಟ್ ಇದ್ದು, ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಡಿಕೆಶಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ದೆಹಲಿಯ ಹೈಕಮಾಂಡ್ ನಿಂದ ಬುಲಾವ್ ಬಂದಿದ್ದರು ಅಲ್ಲಿಗೆ ತೆರಳದೆ ಕ್ಷೇತ್ರದಲ್ಲೇ ನೆಲೆಸಿದ್ದಾರೆ. ಅಲ್ಲದೆ ಭಿನ್ನಮತ ಶಮನಕ್ಕಾಗಿ ಹೊಸ ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ.

Comments are closed.