ಬೆಂಗಳೂರು: ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹಾಗೇ ನೀವು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಪ್ಪಿಕೊಳ್ಳಿ ಎಂದ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಮಾಜಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ, “ಮಿಸ್ಟರ್ ರಾಜೀವ್ ನಾನು ಪ್ರಧಾನಿ ಮೋದಿಯವರ ಹಾಗೇ ಚೋರ್ ಅಲ್ಲ. ನಮ್ಮ ಶತ್ರು ದೇಶದ ಪ್ರಧಾನಿ ಜೊತೆಗೆ ಬಿರಿಯಾನಿ ತಿಂದಿದ್ದು ಮೋದಿಯವರೇ ಹೊರತು, ನಾನಲ್ಲ” ಎಂದು ಕುಟುಕಿದ್ದಾರೆ.
ಇತ್ತೀಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, “ಇಂದು ಮೇ 4 ಹೋರಾಟಗಾರ ಟಿಪ್ಪು ಸುಲ್ತಾನ್ ಕೊನೆಯುಸಿರೆಳೆದ ದಿನ. ಗುಲಾಮಗಿರಿಗೆ ಶರಣಾಗಿ ಬದುಕುವುದಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಲೇಸು ಎಂದು ಟಿಪ್ಪು ಸಾವನ್ನಪ್ಪಿದ್ದರು. ಇವರು ನನಗೆ ಸ್ಪೂರ್ತಿ ಎಂದು ಟಿಪ್ಪು ಬಗ್ಗೆ ಟ್ವೀಟ್ ಮಾಡಿದ್ದರು.
ಟಿಪ್ಪು ಸುಲ್ತಾನ್ ಬಗೆಗಿನ ಇಮ್ರಾನ್ ಖಾನ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್, “ಪ್ರೀತಿಯ ಸಿದ್ದರಾಮಯ್ಯನವರೇ ನವಜೋತ್ ಸಿಂಗ್ ಸಿಧುವಂತೆ ಇಮ್ರಾನ್ರನ್ನು ಅಪ್ಪಿಕೊಳ್ಳಲು ನಿಮಗಿದು ಸರಿಯಾದ ಸಮಯ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ನೀವು ಫೇವರಿಟ್ ಆಗಲು ಸುಲಭ ದಾರಿ” ಎಂದಿದ್ದರು.
ಈ ಬೆನ್ನಲ್ಲೇ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರು, ಮಿಸ್ಟರ್ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡುವ ಮುನ್ನ ಒಮ್ಮೆ ಯೋಚಿಸಿ. ನಮ್ಮ ಶತ್ರು ದೇಶದ ಪ್ರಧಾನಿ ಜೊತೆ ಬಿರಿಯಾನಿ ತಿನ್ನಲು ನಾನು ನಿಮ್ಮ ಚೋರ್ ನರೇಂದ್ರ ಮೋದಿಯಲ್ಲ. ಜತೆಗೆ ಬಾಸ್ಗಳ ಸಂತೈಸಲು ನೈತಿಕತೆ ರಾಜಿ ಮಾಡಿಕೊಳ್ಳುವ ನಿಮ್ಮಂತೆ ಕೂಡ ನಾನು ಆಗಲ್ಲ ಎಂದು ತಪರಾಕಿ ಬಾರಿಸಿದ್ಧಾರೆ.
ಇನ್ನು ನಿಮ್ಮ ಬಾಸ್ಗಾಗಿ ಗುಲಾಮನಂತೆ ಬದುಕುತ್ತಿರುವ ನಿನಗಿಂತ ಟಿಪ್ಪು ಸುಲ್ತಾನನಂತೆ ಬದುಕುವುದು ಒಳ್ಳೆಯದು” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಇಬ್ಬರ ಟ್ವೀಟ್ ವಾರ್ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ.
Comments are closed.