ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾನುವಾರ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ಚೆನ್ನೈ ತಂಡವನ್ನು ಹಿಂದಕ್ಕೆ ತಳ್ಳಿರುವ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನೊಂದೆಡೆ ಮುಂಬೈ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮುಗ್ಗರಿಸಿರುವ ಕೋಲ್ಕೊತಾ ಕೂಟದಿಂದಲೇ ನಿರ್ಗಮಿಸಿದೆ. ಇದರ ಸಂಪೂರ್ಣ ಪ್ರಯೋಜನ ಪಡೆದಿರುವ ಸನ್‌ರೈಸರ್ಸ್ ಹೈದರಾಬಾದ್, ಮುಂಬೈ, ಚೆನ್ನೈ ಹಾಗೂ ಡೆಲ್ಲಿ ತಂಡಗಳ ಬಳಿಕ ನಾಲ್ಕನೇ ತಂಡವಾಗಿ ಪ್ಲೇ-ಆಫ್ ಹಂತವನ್ನು ಪ್ರವೇಶಿಸಿದೆ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 12 ಅಂಕಗಳನ್ನು ಪಡೆದು ಪ್ಲೇ-ಆಫ್‌ಗೆ ಪ್ರವೇಶಿಸಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ.
ಮುಂಬೈ ಇದೀಗ ಆಡಿರುವ 14 ಪಂದ್ಯಗಳಲ್ಲಿ ಒಂಬತ್ತು ಗೆಲುವುಗಳೊಂದಿಗೆ ಒಟ್ಟು 18 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಚೆನ್ನೈ ಜತೆಗೆ ಮೊದಲ ಕ್ವಾಲಿಫೈಯರ್ ಕದನವನ್ನು ಖಚಿತಪಡಿಸಿದೆ. ಈ ಪಂದ್ಯವು ಚೆನ್ನೈಯಲ್ಲಿ ಮೇ 7 ಮಂಗಳವಾರದಂದು ನಡೆಯಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ.
ಅತ್ತ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೇ 8 ಬುಧವಾರ ನಡೆಯಲಿರುವ ಎಲಿಮೇಟರ್‌ನಲ್ಲಿ ಮುಖಾಮುಖಿಯಾಗಲಿದೆ. ಇಲ್ಲಿ ಗೆದ್ದ ತಂಡವು ಶುಕ್ರವಾರ ನಡೆಯುವ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಕ್ವಾಲಿಫೈಯರ್ 1ರ ಸೋತ ತಂಡದ ವಿರುದ್ಧ ಸೆಣಸಲಿದೆ. ಬಳಿಕ ಪ್ರಶಸ್ತಿಗಾಗಿ ಕ್ವಾಲಿಫೈಯರ್ 1 ಹಾಗೂ ಕ್ವಾಲಿಫೈಯರ್ 2 ವಿಜೇತ ತಂಡಗಳ ನಡುವೆ ಮೇ 12 ಭಾನುವಾರದಂದು ಹೈ ವೋಲ್ಟೇಜ್ ಫೈನಲ್ ಕದನ ನಡೆಯಲಿದೆ.
ಡು ಆರ್ ಡೈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಕೆಕೆಆರ್ ಮುಂಬೈ ದಾಳಿಗೆ ತತ್ತರಿಸಿತ್ತಲ್ಲದೆ ಏಳು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಗುರಿ ಬೆನ್ನಟ್ಟಿದ ಮುಂಬೈ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ ಇನ್ನು 3.5 ಓವರ್‌ಗಳು ಬಾಕಿ ಉಳಿದಿರುವಂತೆಯೇ ಒಂದು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು.
ಏತನ್ಮಧ್ಯೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೀನಾಯ ಸೋಲಿಗೆ ಗುರಿಯಾಗಿರುವ ಕೆಕೆಆರ್, 14 ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ 12 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದೊಂದಿಗೆ ಅಭಿಯಾನವನ್ನು ಕೊನೆಗೊಳಿಸಿದೆ.
ಸುಲಭ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಓಪನರ್‌ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭವೊದಗಿಸಿದರು. ಈ ಪೈಕಿ ರೋಹಿತ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಡಿ ಕಾಕ್ ಬಿರುಸಿನ ಆಟದ ಮೂಲಕ ಗಮನ ಸೆಳೆದರು.
ಈ ನಡುವೆ ಪ್ರಸಿದ್ದ್ ಕೃಷ್ಣ ದಾಳಿಯಲ್ಲಿ ಕೆಕೆಆರ್ ನಾಯಕ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್‌ಗೆ ಡಿ ಕಾಕ್ ಬಲಿಯಾದರು. ಆಗಲೇ ರೋಹಿತ್ ಜತೆಗೆ ಮೊದಲ ವಿಕೆಟ್‌ಗೆ 6.1 ಓವರ್‌ಗಳಲ್ಲಿ 46 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗಿದರು. 23 ಎಸೆತಗಳನ್ನು ಎದುರಿಸಿದ ಡಿ ಕಾಕ್ ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 30 ರನ್ ಗಳಿಸಿದರು.
ಬಳಿಕ ಸೂರ್ಯ ಕುಮಾರ್ ಜತೆಗೂಡಿದ ನಾಯಕ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರು. ಕೆಕೆಆರ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿಯು ಮಹತ್ವದ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಅರ್ಹ ಗೆಲುವನ್ನು ಒದಗಿಸಿಕೊಟ್ಟರು.
ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ರೋಹಿತ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ 16.1 ಓವರ್‌ಗಳಲ್ಲೇ ಒಂದು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. 48 ಎಸೆತಗಳನ್ನು ಎದುರಿಸಿದ ರೋಹಿತ್ ಎಂಟು ಬೌಂಡರಿಗಳಿಂದ 55 ರನ್ ಗಳಿಸಿ ಔಟಾಗದೆ ಉಳಿದರು.
ಅತ್ತ ನಾಯಕನಿಗೆ ಉತ್ತಮ ಸಾಥ್ ನೀಡಿದ ಸೂರ್ಯಕುಮಾರ್ 27 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿ ಅಜೇಯರಾಗುಳಿದರು. ರೋಹಿತ್ ಹಾಗೂ ಸೂರ್ಯ ಮುರಿಯದ ಎರಡನೇ ವಿಕೆಟ್‌ಗೆ 88 ರನ್‌ಗಳ ಜತೆಯಾಟ ನೀಡಿದರು. ಇದರೊಂದಿಗೆ ಕೆಕೆಆರ್ ಕನಸು ಕಮರಿತು.