ಕರ್ನಾಟಕ

ಫ್ಯಾನಿ ಚಂಡಮಾರುತ: ರಾಜ್ಯದ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆ

Pinterest LinkedIn Tumblr


ಬೆಂಗಳೂರು: ಫ್ಯಾನಿ ಚಂಡಮಾರುತದ ರೌದ್ರಾವತಾರದ ಪರಿಣಾಮ ತಮಿಳುನಾಡು, ಕರ್ನಾಟಕದ ಕೆಲವೆಡೆ ಭಾರೀ ಮಳೆಯಾಗುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗದ ಬಹುತೇಕ ಪ್ರದೇಶಗಳಲ್ಲಿ ಇವತ್ತು ರಾತ್ರಿ ಧಾರಾಕಾರ ಮಳೆ ಸುರಿದಿದೆ. ಗಾಳಿ, ಗುಡುಗು ಮಿಂಚು ಸಹಿತ ಮಳೆಯ ರೌದ್ರಾವತಾರವಾಗಿದೆ.

ಬೆಂಗಳೂರು, ಮೈಸೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮೊದಲಾದ ಕಡೆ ಒಂದು ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಮಳೆಯಾಗಿದೆ. ಬೆಂಗಳೂರಿನ ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ಮೆಜೆಸ್ಟಿಕ್, ಬಸವನಗುಡಿ, ಜಯನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಮಳೆಯಿಂದಾಗಿ ಹಲವು ಕಡೆ ಭಾರೀ ಟ್ರಾಫಿಕ್ ಕೂಡ ನಿರ್ಮಾಣವಾಗಿದೆ.

ಗ್ರಾಮಾಂತರ ಭಾಗದಲ್ಲಿ ಭೀಕರ ಮಳೆಯಿಂದ ರೈತರ ಬೆಳೆಗಳು ನಾಶವಾಗಿದೆ. ಹಲವು ಭಾಗಗಳು ಕರೆಂಟ್ ಇಲ್ಲದೆ ಕತ್ತಲಲ್ಲಿ ಮುಳುಗಿವೆ.

ಫ್ಯಾನಿ ಚಂಡಮಾರುತದ ಪರಿಣಾಮವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಇವತ್ತು ಮಳೆಯಾಗಿದೆ. ಇನ್ನೆರಡು ದಿನಗಳ ಕಾಲ ಚಂಡಮಾರುತದಿಂದ ರಾಜ್ಯದಲ್ಲಿ ಮಳೆ ಸೃಷ್ಟಿಯಾಗುವ ನಿರೀಕ್ಷೆ ಇದೆ. ಮೇ 3ರಂದು ಫ್ಯಾನಿ ಚಂಡಮಾರುತ ಒಡಿಶಾ ಕಡಲ ತೀರ ಮುಟ್ಟಿ ಹೋಗಲಿದೆ.

ಇದೇ ವೇಳೆ, ಬಿಸಿ ಗಾಳಿಯಿಂದ ನಲುಗಿಹೋಗಿರುವ ಯಾದಗಿರಿಯಲ್ಲೂ ಪ್ರಬಲ ಗಾಳಿ ಬೀಸುತ್ತಿದ್ದು ಮಳೆಯಾಗುವ ಸಂಭವ ಇದೆ.

Comments are closed.