ಕರ್ನಾಟಕ

ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್, ಜೆಡಿಎಸ್ ಕಣ್ಮರೆ

Pinterest LinkedIn Tumblr


ಹೊಳೆಹೊನ್ನೂರು: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ದೇಶದಲ್ಲಿ ಕಾಂಗ್ರೆಸ್, ರಾಜ್ಯದಲ್ಲಿ ಜೆಡಿಎಸ್ ಪಕ್ಷಗಳು ಕಣ್ಮರೆ ಆಗುವುದರಲ್ಲಿ ಎರಡು ಮಾತಿಲ್ಲ. ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಪರ್ವ ನಿಶ್ಚಿತ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಆನವೇರಿಯಲ್ಲಿ ಬುಧವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಐದು ವರ್ಷಗಳಿಂದ ಕಂಳಕ ರಹಿತ ಆಡಳಿತ ನಡೆಸಿ ರಾಜಕೀಯ ಮತ್ತು ಕಳಂಕಕ್ಕೆ ಇದ್ದ ನಂಟನ್ನು ಬೇರ್ಪಡಿಸಿದ ಕೀರ್ತಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ಹೇಳಿದರು.

ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ದೇವೇಗೌಡರು ಕುಟುಂಬಕ್ಕೋಸ್ಕರ ರಾಜಕೀಯ ಮಾಡಿದರೆ ಮೋದಿ ದೇಶದ ಹಿತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ದೇಶದಲ್ಲಿ ಅಭಿವೃದ್ಧಿಯ ನಾಗಾಲೋಟ ಕಾಣುತ್ತಿದೆ. ಬಡವರ ಬದುಕಿನ ಭವಿಷ್ಯಕ್ಕೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅನಿವಾರ್ಯ ಎಂದರು.

ನದಿ ಜೋಡಣೆಗೆ ಆದ್ಯತೆ: ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿ ಭಾರತದ ಅಭಿವೃದ್ಧಿ ಅಚ್ಚರಿ ಉಂಟು ಮಾಡಿದೆ. ರೈತನ ಬದುಕು ಸಂಕಷ್ಟದಲ್ಲಿದೆ. ರೈತರ ಉದ್ಧಾರಕ್ಕಾಗಿ ಮೋದಿ ಸರ್ಕಾರ ದೂರಗಾಮಿ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ 60 ಲಕ್ಷಕ್ಕೂ ಅಧಿಕ ಜನ ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆದಿದ್ದಾರೆ. ನದಿ ಜೋಡಣೆ ಭವಿಷ್ಯದ ಆದ್ಯತೆಯ ಯೋಜನೆಯಾಗಿದೆ. ಗೋದಾವರಿ ಕಾವೇರಿ ಜೋಡಣೆಯಾದರೆ ನೀರಾವರಿಯಲ್ಲಿ ದೊಡ್ಡ ಪ್ರಮಾಣದ ಉಪಯೋಗವಾಗುತ್ತದೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರ ಕಳಪೆ ಸಾಧನೆಯಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಗುತ್ತಿಗೆದಾರರಿಂದ ಹಣ ಸಂಗ್ರಹಿಸಿ ಮೈತ್ರಿ ಸರ್ಕಾರ ಚುನಾವಣೆ ನಡೆಸುತ್ತಿದೆ. ಲೋಕಸಭಾ ಚುನಾವಣೆ ನಂತರ ರಾಜ್ಯದ ಮೈತ್ರಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ತಿಳಿಸಿದರು.

ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ, ಮಂಡಲ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ಭಾನುಪ್ರಕಾಶ್, ಗಿರೀಶ್ ಪಾಟೀಲ್, ವೀರಭದ್ರಪ್ಪ ಪೂಜಾರ್, ಕೆ.ಇ.ಕಾಂತೇಶ್, ಎಸ್.ಪಿ.ದಿನೇಶ್, ಎಂ.ರಾಜಶೇಖರ್, ಮಂಜಣ್ಣ, ತಿಪ್ಪೇಶ್, ಮಾವುರಪ್ಪ ಪೂಜಾರ್, ಶ್ರೀನಿವಾಸ್, ಬಾಳೋಜಿ ಕೃಷ್ಣೋಜಿರಾವ್, ಮಲ್ಲೇಶ್ ಇತರರಿದ್ದರು.

Comments are closed.