ಕರ್ನಾಟಕ

ಪ್ರಧಾನಿಯಂತೆ ದಿನವೂ ಮುಖಕ್ಕೆ ವ್ಯಾಕ್ಸಿಂಗ್​ ಮಾಡಿಸಿಕೊಂಡು ಮುಖ ಶೈನಿಂಗ್​ ಬರುವಂತೆ ಮಾಡಿಕೊಳ್ಳುವುದಿಲ್ಲ; ಕುಮಾರಸ್ವಾಮಿ

Pinterest LinkedIn Tumblr


ಶಿವಮೊಗ್ಗ: ನಾನು ಪ್ರಧಾನಿಯಂತೆ ದಿನವೂ ಮುಖಕ್ಕೆ ವ್ಯಾಕ್ಸಿಂಗ್​ ಮಾಡಿಸಿಕೊಂಡು ಮುಖ ಶೈನಿಂಗ್​ ಬರುವಂತೆ ಮಾಡಿಕೊಳ್ಳುವುದಿಲ್ಲ. ಅವರಂತೆ ಬಡವರು ಮುಟ್ಟಿದಾಕ್ಷಣ ಕೈಗೆ ಡೆಟಾಲ್ ಹಾಕಿಕೊಂಡು ಕೈತೊಳೆದುಕೊಳ್ಳುವುದಿಲ್ಲ ಎಂದು ತಮ್ಮ ವಿರುದ್ಧ ಬಣ್ಣದ ನಿಂದನೆ ಮಾಡಿದ್ದ ಶಾಸಕ ರಾಜು ಕಾಗೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು

ಶಿಕಾರಿಪುರದಲ್ಲಿ ಮಾತನಾಡಿದ ಅವರು, ನಾನು ಬಡವರೊಂದಿಗೆ ಬೆರೆಯುತ್ತೇನೆ. ಬಡವರ ಬೆವರು ನನ್ನ ಕೈಗೆ ತಾಗಿರುತ್ತದೆ. ಆ ಕೈ ತೊಳೆಯದೆ‌ ನಾನು ಊಟ ಮಾಡಿದ್ದೇನೆ. ಇವರು ಹೇಳಿದಂತೆ ನಾನು 20 ಸಲ ಸ್ನಾನ ಮಾಡಿದಾಕ್ಷಣ ಬಿಳುಪಾಗುವುದಿಲ್ಲ ಎಂದು ಸಿಎಂ ಚಾಟಿ ಬೀಸಿದರು.

ಬಿಎಸ್​ವೈಗೆ ಮತ ಕೇಳಲು ಮುಖ ಇಲ್ಲ

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಬಿಜೆಪಿ ರಾಜ್ಯಾಧ್ಯಕ್ಷರ ತವರಿನಲ್ಲಿ ಪ್ರಚಾರ ನಡೆಸಿದ ಸಿಎಂ ಎಚ್​ಡಿಕೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಬಿಎಸ್​ವೈಗೆ ಜನರ ಸಮಸ್ಯೆ ಬೇಕಿಲ್ಲ, ಸಿಎಂ ಆಗಬೇಕಿದೆ. ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ. ಯಾಕೆ ಇವರ ಮುಖ ನೋಡಿ ಮತ ಕೇಳಲು ಇವರಿಗೆ ಸಾಮರ್ಥ್ಯ ಇಲ್ಲವೇ ಎಂದು ಪ್ರಶ್ನಿಸಿದರು. ಹಾಗಾದರೆ ಮೋದಿ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಏನು ಎಂದರು.

ಮೈತ್ರಿ ಸರ್ಕಾರ ಬೀಳಿಸಲು ಶಾಸಕರನ್ನು ಕರೆದೊಯ್ಯುವುದಕ್ಕೆ ಬಿಎಸ್​ ಯಡಿಯೂರಪ್ಪ ಅವರಿಗೆ ಸಮಯ ಸಾಲುತ್ತಿಲ್ಲ. ಇನ್ನು ಶಿಕಾರಿಪುರದ ಅಭಿವೃದ್ಧಿಗೆ ಎಲ್ಲಿ ಅವರಿಗೆ ಸಮಯವಿದೆ. ಮೇ 24ರಂದು ತಾನು ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಅವರಿಗೆ ಯಾವ ಜ್ಯೋತಿಷಿ ಈ ರೀತಿ ಹೇಳಿದ್ದಾನೋ ಎಂದು ವ್ಯಂಗ್ಯವಾಡಿದರು.

ರೈತ ನಾಯಕ ಎಂಬಂತೆ ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಕೆಲ ತಿಂಗಳಲ್ಲೇ ರೈತರ ಮೇಲೆ ಗೋಲಿಬಾರ್ ಮಾಡಿಸಿದರು. ಅಂಥವರು ಈಗ ರೈತರ ಬಗ್ಗೆ ಮಾತನಾಡುತ್ತಾರೆ. ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರೂ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಿರಲಿಲ್ಲ. ರೈತರ ಸಾಲ ಮನ್ನಾ ಮಾಡಿ ಎಂದರೆ‌ ಹಣ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದು ಹೇಳಿದ್ದರು. ಈಗ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಸಿಎಂ ಆದಾಗ ಶಿಕಾರಿಪುರ ಸೊರಬದ ನೀರಾವರಿ ಯೋಜನೆಗಳಿಗೆ ಕ್ರಮಕೈಗೊಂಡಿಲ್ಲ. ಯಡಿಯೂರಪ್ಪ ನಾಲ್ಕು ವರ್ಷ ಸಂಸದರಾಗಿದ್ದರಲ್ಲ ಮೋದಿಯನ್ನು ಒಪ್ಪಿಸಿ ಇಷ್ಟೊತ್ತಿಗಾಗಲೇ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬಹುದಿತ್ತು. ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಅಭಿವೃದ್ಧಿ ಎಂದರೆ ರಸ್ತೆಗಳನ್ನು ನಿರ್ಮಾಣ ಮಾಡುವುದಲ್ಲ. ಇವರು ಬಿಲ್ಡಿಂಗ್​ ನಿರ್ಮಾಣ ಮಾಡಿದ್ದು, ಬೆಂಗಳೂರು, ಬಾಂಬೆಗಳಲ್ಲಿ ಹೋಟೆಲ್​ ಕಟ್ಟುವ ಉದ್ದೇಶದಿಂದ ಎಂದು ಕುಟುಕಿದರು.

ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿ ಆಗುವುದಿಲ್ಲ. ಮೋದಿ ಸೋಲಿಸಲು ಉತ್ತರ ಭಾರತ ಜನತೆ ಸಿದ್ಧರಿದ್ದಾರೆ. ಚಾಯ್ ವಾಲಾ ಈಗ ರೈಲ್ವೇ ನಿಲ್ದಾಣ ಬಿಟ್ಟು, ಈಗ ಶ್ರೀಮಂತರ ಜೊತೆಯಿರುವ ಚೌಕಿದಾರ ಆಗಿದ್ದಾರೆ. ನಿಮ್ಮ ಕ್ಷೇತ್ರದ ಕಷ್ಟ-ಸುಖದಲ್ಲಿ ನಿಮ್ಮ ಜೊತೆ ಇರುತ್ತೇವೆ. ಮಧುಗೆ ಆಶೀರ್ವದಿಸುವಂತೆ ಮನವಿ ಮಾಡಿದರು.

Comments are closed.