ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ; ಪೋಷಕರೆ ಎಚ್ಚರ!

Pinterest LinkedIn Tumblr


ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ರಾಜ್ಯದ 6.73 ಲಕ್ಷ ವಿದ್ಯಾರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಆದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಫಲಿತಾಂಶಕ್ಕೂ ಮುನ್ನ ಪೋಷಕರು ಎಚ್ಚರವಹಿಸಬೇಕಾದ ಅಗತ್ಯವಿದೆ.

ಶಾಲಾ-ಕಾಲೇಜು ಪರೀಕ್ಷೆ ಹಾಗೂ ಫಲಿತಾಂಶದ ಸಂದರ್ಭದಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಒತ್ತಡವೇ ಆತ್ಮಹತ್ಯೆಯಂತಹ ಪ್ರಕರಣಗಳಿಗೆ ಕಾರಣ ಎನ್ನುತ್ತಾರೆ ಮನಶಾಸ್ತ್ರಜ್ಞರು. ಈ ಕುರಿತು ಕೇಂದ್ರ ಗೃಹ ಸಚಿವಾಲಯ ನೀಡುವ ಅಂಕಿಅಂಶಗಳು ನಮ್ಮಲ್ಲಿ ಮತ್ತಷ್ಟು ಆತಂಕ ಮೂಡಿಸುತ್ತದೆ.

ಗೃಹ ಸಚಿವಾಲಯ ನೀಡುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಪ್ರತಿಗಂಟೆಗೊಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಇನ್ನೂ ರಾಜ್ಯದ ವಿಚಾರಕ್ಕೆ ಬಂದರೆ ಸರಾಸರಿಯಾಗಿ ದಿನಕ್ಕೊಬ್ಬ ವಿದ್ಯಾರ್ಥಿ/ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಫಲಿತಾಂಶದ ಸಂದರ್ಭದಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚುತ್ತಿರುವುದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳ ಮೇಲೆ ಹೆಚ್ಚು ಕಾಳಜಿವಹಿಸಬೇಕಾದ ಅಗತ್ಯವಿದೆ.

ಆತ್ಮಹತ್ಯೆ ಪ್ರಮಾಣದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ : ಖಿನ್ನತೆಯ ಕಾರಣಕ್ಕೆ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವ ಪಟ್ಟಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ 2016ರಲ್ಲಿ ರಾಜ್ಯದಲ್ಲಿ 540 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂದರೆ ಪ್ರತಿದಿನ ಸರಾಸರಿಯಾಗಿ 1.47 ರಷ್ಟು ಮಕ್ಕಳು ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2017-18 ರ ಅವಧಿಯಲ್ಲೂ ಈ ಪ್ರಮಾಣ ಶೇ. 9 ರಷ್ಟು ಅಧಿಕವಾಗಿದೆ ಎಂಬ ಆತಂಕಕಾರಿ ಅಂಕಿಅಂಶಗಳನ್ನು ಮುಂದಿಡುತ್ತಿದೆ ಗೃಹಸಚಿವಾಲಯ.

ತಮಿಳುನಾಡಿನಲ್ಲಿ ಪ್ರತಿ ವರ್ಷ ಸರಾಸರಿಯಾಗಿ 981 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ವಿದ್ಯಾರ್ಥಿಗಳ ಆತ್ಮಹತ್ಯೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಹೀಗೆ ಆತ್ಮಹತ್ಯೆಗೆ ಶರಣಾಗುತ್ತಿರುವವರ ಪೈಕಿ 10 ರಿಂದ 19 ವರ್ಷದ ಮಕ್ಕಳ ಸಂಖ್ಯೆಯೇ ಅಧಿಕ. “ಪರೀಕ್ಷೆ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಮೇಲೆ ಹೆಚ್ಚು ಒತ್ತಾಡ ಹಾಕುತ್ತಿರುವುದು ಹಾಗೂ ಫಲಿತಾಂಶದ ದಿನದಂದು ಉಂಟಾಗುವ ಅನವಶ್ಯಕ ಒತ್ತಡಗಳು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಲು ಕಾರಣ” ಎನ್ನುತ್ತಾರೆ ಖ್ಯಾತ ಮನಶಾಸ್ತ್ರಜ್ಞೆ ಸಂಧ್ಯಾ ಕಾವೇರಿ.

ಇಂತಹ ಪ್ರಕರಣಗಳ ತಡೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ಏರ್ಪಡಿಸಿ ಮಕ್ಕಳನ್ನು ಮಾನಸಿಕವಾಗಿ ಆರೋಗ್ಯವಂತರನ್ನಾಗಿಡಲು ಸಾಧ್ಯ. ಆದರೆ ವಾಸ್ತವದಲ್ಲಿ ಇದು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಾಧ್ಯವಾಗದೆ ಇರುವುದು ಸಹ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಲು ಕಾರಣ.

ಪೋಷಕರ ಗಮನಕ್ಕೆ! : ಇನ್ನೇನು ಕೆಲವೇ ಗಂಟೆಗಳಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ 6.73 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಆದರೆ ಫಲಿತಾಂಶಕ್ಕಿಂತ ಮಕ್ಕಳ ಜೀವ ಹಾಗೂ ಭವಿಷ್ಯ ಮುಖ್ಯ. ಅಕಸ್ಮಾತ್ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ ಅಥವಾ ನಪಾಸಾಗಿದ್ದರೆ ಪೋಷಕರು ಅವರನ್ನು ದೂರಬೇಡಿ, ನಿಂದಿಸುವ ಮೂಲಕ ಅವರ ಮೇಲೆ ಅನವಶ್ಯಕ ಒತ್ತಡ ಹೇರಬೇಡಿ.

ಇದು ನಿಮ್ಮ ಮಗು ಮಾನಸಿಕ ಖಿನ್ನತೆಗೆ ಒಳಗಾಗಲು ಕಾರಣವಾಗಬಹುದು. ಖಿನ್ನತೆ ಆತ್ಮಹತ್ಯೆಗೆ ದಾರಿ ಮಾಡಿಕೊಡಬಹುದು.ಹೀಗಾಗಿ ಆಡಲು ಹೋದ ಮಕ್ಕಳು ಮನೆಗೆ ಮರಳಿ ಬಾರದ ಸ್ಥಿತಿಗೆ ಫೋಷಕರೇ ಕಾರಣರಾಗಬೇಡಿ. ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ.

Comments are closed.