ಕರ್ನಾಟಕ

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿ 3 ಕುರಿ, 19 ಹಸು, 4 ಎತ್ತುಗಳು!

Pinterest LinkedIn Tumblr


ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಬಳಿ ಸಾಕಷ್ಟು ಹಣವಿದೆ. ಅವರು ಬೇಕಾದಷ್ಟು ದುಡ್ಡು ಹಂಚುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದರು. ಆದರೆ ವೈ.ದೇವೇಂದ್ರಪ್ಪ ಬಳಿ ಹಣಕ್ಕಿಂತ ಹಸು, ಕುರಿ ಎತ್ತುಗಳಿದ್ದು ಆದಾಯ ತೆರಿಗೆ ಪಾವತಿದಾರರಲ್ಲ.

ವೈ.ದೇವೇಂದ್ರಪ್ಪ ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಶ್ರೀಮಂತರಾಗಿದ್ದಾರೆ. ಅಷ್ಟೇ ಅಲ್ಲದೇ ಉಗ್ರಪ್ಪ ಅವರು ಕೋಟಿ ರೂ. ಸಾಲಗಾರರು ಕೂಡ ಆಗಿದ್ದಾರೆ.

ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪ 67 ವರ್ಷದವರಾಗಿದ್ದು, 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 2.31 ಕೋಟಿ ರೂ. ಆಗಿದ್ದು, ಆದಾಯ ತೆರಿಗೆ ಪಾವತಿದಾರರಲ್ಲ. ದೇವೇಂದ್ರಪ್ಪ ಅವರ ಬಳಿ 1.50 ಲಕ್ಷ ರೂ. ನಗದು, 8.87 ಲಕ್ಷ ರೂ. ಮೌಲ್ಯದ ಚಿನ್ನ ಬೆಳ್ಳಿಯ ಆಭರಣ, ತಿಮ್ಮಲಾಪುರ, ಹಡಗಲಿ, ಮೈಸೂರು, ಬೆಂಗಳೂರು, ಅರಸಿಕೇರಿಯಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗೆ ದಾವಣಗೆರೆ ಹಾಗೂ ಅರಸಿಕೇರೆಯಲ್ಲಿ ಅಪಾರ್ಟಮೆಂಟ್ ಸೇರಿ 1.17 ಕೋಟಿ ರೂ. ಮೌಲ್ಯದ ಚಿರಾಸ್ತಿ ಹೊಂದಿದ್ದಾರೆ. ಬ್ಯಾಂಕ್‍ನಲ್ಲಿ 32 ಲಕ್ಷ ರೂ. ಇಟ್ಟಿದ್ದು, 1.30 ಲಕ್ಷ ರೂ. ಸಾಲ ಪಡೆದಿದ್ದಾರೆ.

ದೇವೇಂದ್ರಪ್ಪ ಪತ್ನಿ, ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯೆ ಸುಶೀಲಮ್ಮ ಆದಾಯ ತೆರಿಗೆ ಪಾವತಿದಾರರಾಗಿದ್ದು, 13.64 ಲಕ್ಷ ರೂ. ಆದಾಯ ಘೋಷಿಸಿದ್ದಾರೆ. ವಿವಿಧ ಬ್ಯಾಂಕ್‍ಗಳಲ್ಲಿ 49.59 ಲಕ್ಷ ರೂ. ಹೊಂದಿದ್ದು, 18.15 ಲಕ್ಷ ರೂ. ಮೌಲ್ಯದ ಆಭರಣ ಅವರ ಬಳಿ ಇದೆ. 62.93 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 34.62 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಬಿ.ಎಸ್ಸಿ, ಎಲ್‍ಎಲ್‍ಬಿ ಪದವೀಧರರಾಗಿದ್ದಾರೆ. ಅವರ ಬಳಿ 2.77 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 8.05 ಕೋಟಿ ರೂ. ಸ್ಥಿರಾಸ್ತಿ ಇದೆ. ಜೊತೆಗೆ 2.2 ಕೆಜಿ ಚಿನ್ನಾಭರಣ ಹಾಗೂ 17 ಕೆಜಿ ಬೆಳ್ಳಿ ಹೊಂದಿದ್ದಾರೆ. ಉಗ್ರಪ್ಪ 2.22 ಕೋಟಿ ರೂ. ಸಾಲಗಾರರಾಗಿದ್ದು, ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

Comments are closed.