ಕರ್ನಾಟಕ

ಹಾಸನ: ಬಿಜೆಪಿ ಅಧ‍್ಯಕ್ಷ ಕಾಂಗ್ರೆಸ್‍ ಸೇರ್ಪಡೆ

Pinterest LinkedIn Tumblr


ಬೆಂಗಳೂರು: ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಅವರು ಗುರುವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಯೋಗಾ ರಮೇಶ ಅವರನ್ನು‌ ಅಧಿಕೃತವಾಗಿ ಕೆಪಿಸಿಸಿ ಅಧ‍್ಯಕ್ಷ ದಿನೇಶ್ ಗುಂಡೂರಾವ್ ಪಕ್ಷಕ್ಕೆ ಬರಮಾಡಿಕೊಂಡರು. ಇದೇ ವೇಳೆ ಯೋಗಾ ರಮೇಶ್ ಅವರ ಹಲವು ಬೆಂಬಲಿಗರು ಕೂಡ ಪಕ್ಷ ಸೇರಿದರು.
ಕಾಂಗ್ರೆಸ್‍ ಮುಖಂಡ, ಮಾಜಿ ಸಚಿವ ಎ.ಮಂಜು ಬಿಜೆಪಿಗೆ ಸೇರ್ಪಡೆಯಿಂದ ಯೋಗಾ ರಮೇಶ್ ತೀವ್ರ ಅಸಮಾಧಾನಗೊಂಡಿದ್ದರು. ಎ.ಮಂಜುಗೆ ಸಡ್ಡು ಹೊಡೆಯಲು ಹಾಗೂ ಹಾಸನ‌ದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಲು ಯೋಗಾ ರಮೇಶ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ವೇಳೆ ಮಾತನಾಡಿದ ದಿನೇಶ್‍ ಗುಂಡೂರಾವ್‍, ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರನ್ನು ಗೆಲ್ಲಿಸಲು ಯೋಗಾ‌ ರಮೇಶ್‌ ಕಾಂಗ್ರೆಸ್ ಸೇರಿದ್ದಾರೆ. ಸ್ವಾರ್ಥಕ್ಕಾಗಿ ವೈಯಕ್ತಿಕ ಲಾಭಕ್ಕಾಗಿ ಎ.ಮಂಜು ಬಿಜೆಪಿ ಸೇರಿದ್ದಾರೆ. ನಿಜವಾಗಿಯೂ ಅವರು ಬಿಜೆಪಿಗೆ ಏಕೆ ಸೇರಿದ್ದು ಎಂಬುದು ಇದುವರೆಗೆ ತಮಗೆ ಗೊತ್ತಿಲ್ಲ. ಮುಂದೊಂದು ದಿನ ಅವರು ಬಿಜೆಪಿಯಿಂದ ಬೇಸತ್ತು ಮತ್ತೆ ಕಾಂಗ್ರೆಸ್ ಗೆ ವಾಪಸಾಗುತ್ತಾರೆ. ಆದರೆ ಅವರಿಗೆ ಕಾಂಗ್ರೆಸ್ ಕದ ಶಾಶ್ವತವಾಗಿ ಮುಚ್ಚಿದೆ ಎಂದರು.
ಯೋಗಾ ರಮೇಶ್ ಹಾಸನದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು‌. ಅಂತವರನ್ನು ಬಿಜೆಪಿ ಕೈಬಿಟ್ಟು ಕಾಂಗ್ರೆಸಿನಲ್ಲಿ ಎಲ್ಲವನ್ನು ಅನುಭವಿಸಿ ಹೋದ‌ ಮಂಜು ಅವರಿಗೆ ಮನ್ನಣೆ ನೀಡಿದೆ. ಸಿದ್ಧಾಂತವನ್ನು ಮರೆತು ಮಂಜು ಬಿಜೆಪಿ ಸೇರಿದ್ದಾರೆ. ಯೋಗಾ ರಮೇಶ್ ಅವರಿಗೆ ಪಕ್ಷ ಮುಂದಿನ ದಿನಗಳಲ್ಲಿ ಸೂಕ್ತ ಜವಾಬ್ದಾರಿ ನೀಡಲಿದೆ ಎಂದು ಭರವಸೆ ನೀಡಿದರು.

Comments are closed.